ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ನಿವೃತ್ತ ನ್ಯಾಯಾಧೀಶ ಸದಾಶಿವ ವರದಿಯನ್ನು ಕೂಡಲೆ ಜಾರಿಗೆ ತರುವುದರ ಮೂಲಕ, ಈ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ಆಗ್ರಹಿಸಿದರು.
ಪಟ್ಟಣದ ಮಾದಿಗ ದಂಡೋರ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಮಾದಿಗ ದಂಡೋರ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, 24 ವರ್ಷಗಳಿಂದ ಸಂಘಟನೆಯ ರಾಷ್ಟೀಯ ಅಧ್ಯಕ್ಷ ಮಂದ ಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಒಳ ಮೀಸಲಾತಿಗಾಗಿ ಸತತ ಹೋರಾಟ ನಡೆಸಲಾಗುತ್ತಿದೆ. ಆದರೆ ಸರ್ಕಾರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಹೇಳಿದರು.
ಅನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ ಕರ್ನಾಟಕದಲ್ಲೂ ಒಳ ಮೀಸಲಾತಿ ಜಾರಿಗೆ ಬರಬೇಕು. ಮಾದಿಗ ದಂಡೋರ ಸಮುದಾಯಕ್ಕೆ ಒಳ ಮೀಸಲಾತಿ ನೀಡುವಂತೆ ಒತ್ತಾಯಿಸಿ ಅ.11 ರಂದು ಬೀದರ್ ಜಿಲ್ಲಾ ಬಂದ್‍ಗೆ ಕರೆ ನೀಡಲಾಗಿದೆ. ಬಂದ್‍ಗೆ ಎಲ್ಲರೂ ಬೆಂಬಲ ವ್ಯಕ್ತಪಡಿಸಬೇಕು. ಜತೆಗೆ ಬಂದ್ ಸಂದರ್ಭದಲ್ಲಿ ಅಲ್ಲಿ ಹಾಜರಿರಬೇಕು ಎಂದು ಹೇಳಿದರು.
ಸಂಘಟನೆಯ ಮುಖಂಡರಾದ ಎಂ.ಶ್ಯಾಮ್‍ರಾಜ್, ಎನ್.ಚಂದ್ರಪ್ಪ, ನಾರಾಯಣಸ್ವಾಮಿ, ಜಿ.ಶಂಕರ್, ರಾಮಪ್ಪ, ಮುನಿರಾಜು, ಮಂಜುನಾಥ್, ಶಿವಾನಂದ, ಅನಿಲ್ ಕುಮಾರ್, ಲಕ್ಷ್ಮಣ, ಪಾಪಣ್ಣ, ಮಂಜುಳ ಇದ್ದರು.