ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ನಿವೃತ್ತ ಸರ್ಕಾರಿ ನೌಕರರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಶಿರಸ್ತೇದಾರ್ ಮನೋಹರ ಮಾನೆ ಸಲಹೆ ಮಾಡಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ನಿವೃತ್ತ ಸರ್ಕಾರಿ ನೌಕರರು ತಮ್ಮ ನಿವೃತ್ತ ಜೀವನ ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು. ಯಾವುದಾದರೊಂದು ಸಮಾಜ ಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕುಟುಂಬ ಹಾಗೂ ಸಮಾಜದ ಕ್ಷೇಮದ ಬಗ್ಗೆ ಚಿಂತಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಅಧಿಕಾರ ಶಾಸ್ವತವಲ್ಲ. ಆದರೆ ಸೇವೆಯಲ್ಲಿದ್ದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಾಮಾಣಿಕ ಸೇವೆ ಮಾಡಿದಲ್ಲಿ ಜನ ಗೌರವಿಸುತ್ತಾರೆ. ನಿವೃತಿಯ ಬಳಿಕ ನೆಮ್ಮದಿ ಸಿಗುತ್ತದೆ. ಜೀವನದಲ್ಲಿ ಸಾರ್ಥಕ ನೆನೆಪುಗಳು ಉಳಿಯದಲು ಸಾಧ್ಯವಾಗುತ್ತದೆ. ಕುಟುಂಬದೊಂದಿಗಿನ ಒಡನಾಟ ಮನಸ್ಸಿಗೆ ಸಂತೋಷ ನೀಡುತ್ತದೆ ಎಂದು ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್ ಮಾತನಾಡಿ, ಸರ್ಕಾರ 7ನೇ ವೇತನ ಆಯೋಗ ರಚಿಸಿಲು ಒಪ್ಪಿಗೆ ನೀಡಿದೆ. ವೇತನ ಆಯೋಗದ ಶಿಫಾರಸ್ಸುಗಳು ಜಾರಿಗೆ ಬಂದಲ್ಲಿ ನಿವೃತ್ತ ನೌಕರರಿಗೆ ಲಾಭವಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಪ್ರಾಂಶುಪಾಲ ಬಷೀರ್ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಸರ್ಕಾರಿ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಎ.ಬೈರಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ್, ಖಜಾಂಚಿ ತಿಪ್ಪಾರೆಡ್ಡಿ, ಜಿಲ್ಲಾ ಘಟಕದ ನಿರ್ದೇಶಕ ಮುನಿಯಪ್ಪ, ಎಸ್‍ಬಿಐ ವ್ಯವಸ್ಥಾಪಕಿ ಉಮಾ, ಕ್ಷೇತ್ರಾಧಿಕಾರಿ ಲಲಿತಾ, ಆಂಜನೇಯರೆಡ್ಡಿ, ರೇಣುಕಮ್ಮ, ನಾರಾಯಣರೆಡ್ಡಿ, ನಾಗರಾಜಾಚಾರ್, ಎಚ್.ಎಂ.ವೆಂಕಟಶಾಮಿ, ಗೋವಿಂದಯ್ಯ ಇದ್ದರು.