ಕೋಲಾರ / ಏಪ್ರಿಲ್ 4 : ಕೋಲಾರ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ನೀಡುತ್ತಿರುವ ಮೊಟ್ಟೆಯ ಧರ ಇಲಾಖೆಯಿಂದ ರೂ.6 ನೀಡುತ್ತಿದ್ದು, ಸದರಿ ಧರವನ್ನು 7.50ಕ್ಕೆ ಹೆಚ್ಚಿಸಲು ಕೋರಿ ಪ್ರಜಾ ಸೇವಾ ಸಮಿತಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗವನಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿಯು ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ, ಫಲಾನುಭವಿಗಳಾದ ಗರ್ಭಿಣಿ, ಬಾಣಂತಿಯರಿಗೆ ವಾರಕ್ಕೆ 5 ದಿನ ಹಾಗೂ ಮಕ್ಕಳಿಗೆ ವಾರಕ್ಕೆ ಮಂಗಳವಾರ, ಶುಕ್ರವಾರ ಅಂದರೆ 2 ದಿನ ಮೊಟ್ಟೆ ನೀಡುತ್ತಿದ್ದು, ಇಲಾಖೆಯಿಂದ ನಿಗಧಿಪಡಿಸಿರುವ ಮೊಟ್ಟೆ ಧರ 1 ಮೊಟ್ಟೆಗೆ ರೂ.6/-ಗಳಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಮತ್ತು ನಗರ ಪ್ರದೇಶದಲ್ಲಿ ಒಂದು ಮೊಟ್ಟೆಗೆ ರೂ. 7/- ರಿಂದ 7.50 ವರೆಗೆ ಧರ ನೀಡಿ ಅಂಗನವಾಡಿ ಕಾರ್ಯಕರ್ತೆಯರು ಖರೀದಿ ಮಾಡಬೇಕಾಗಿದೆ. ಕಾರ್ಯಕರ್ತರು ತಮ್ಮ ಸ್ವಂತ ಹಣ ಹೆಚ್ಚುವರಿಯಾಗಿ ರೂ.1 ರಿಂದ 1.50 ವರೆಗೂ ನೀಡಿ ಖರೀದಿ ಮಾಡಿ ವಿತರಿಸುತ್ತಿದ್ದಾರೆ.
ಆಗಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ನೀಡುತ್ತಿರುವ ಇಲಾಖಾ ಮೊಟ್ಟೆಯ ಧರ ರೂ. 6 ರಿಂದ 7.50ಕ್ಕೆ ಹೆಚ್ಚುವರಿ ಮಾಡಿ ಕಾರ್ಯಕರ್ತೆಯರು ಸ್ವಂತ ಹಣದಲ್ಲಿ ನೀಡುತ್ತಿರುವುದನ್ನು ತಪ್ಪಿಸಿ ಬಡ ಕಾರ್ಯಕರ್ತರಿಗೆ ಸಹಾಯ ಮಾಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗವನಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ. ಶಿವಣ್ಣ, ರಾಜ್ಯ ಸಂಚಾಲಕಿ ನಾಗವೇಣಮ್ಮ, ರಾಜ್ಯ ಉಪಾಧ್ಯಕ್ಷೆ ವಿ.ಜಮುನಾರಾಣಿ, ರಾಜ್ಯ ಸಮಿತಿ ಸದಸ್ಯರಾದ ಪುಷ್ಪ, ಸರಸ್ಪತಿ, ರಾಧ ಮುಂತಾದವರು ಉಪಸ್ಥಿತರಿದ್ದರು.