ಕೋಲಾರ; ಸೆ.30: ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡುವ ಜೊತೆಗೆ ಬೆಲೆ ಕುಸಿತದಿಂದ ಕಂಗಾಲಾಗಿರುವ ಹೂ, ಟೊಮೆಟೊ ಬೆಳೆಗಾರರ ರಕ್ಷಣೆಗೆ ಪ್ರತಿ ಕೆಜಿಗೆ 10 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಬೇಕು ಜೊತೆಗೆ ನರ್ಸರಿ ಕಾಯ್ದೆಯನ್ನು ಜಾರಿಗೆ ಮಾಡಬೇಕೆಂದು ಆಗ್ರಹಿಸಿ ರೈತಸಂಘದಿಂದ ನಷ್ಟ ಟೊಮೆಟೊ ಸಮೇತ ಕೃಷಿ ಸಚಿವ ಚೆಲುವರಾಯಸ್ವಾಮಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾದ್ಯಂತ ರೈತರ ನಿದ್ದೆಗೆಡಿಸುತ್ತಿರುವ ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣ ಮಾಡುವಲ್ಲಿ ತೋಟಗಾರಿಕೆ, ಕೃಷಿ ಅಧಿಕಾರಿಗಳು ವಿಫಲವಾಗಿ ನಕಲಿ ಕಂಪನಿಗಳ ಜೊತೆ ಶಾಮೀಲಾಗಿದ್ದಾರೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಕೃಷಿ ಸಚಿವರಿಗೆ ದೂರು ನೀಡಿದರು.
ರಾಜ್ಯಾದ್ಯಂತ ರೈತರ ನಿದ್ದೆಗೆಡಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣ ಮಾಡಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡುವ ಜೊತೆಗೆ ರೈತರನ್ನು ವಂಚನೆ ಮಾಡುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಲು ಪ್ರಭಲ ಕಾನೂನು ಜಾರಿ ಮಾಡುವ ಮುಖಾಂತರ ರೈತರ ಶ್ರಮದ ಬೆವರ ಹನಿ ಕಸಿಯುವ ಕಂಪನಿಗಳ ವಿರುದ್ಧ ಸರ್ಕಾರ ಚಾಟಿ ಬೀಸುವ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾದ್ಯಂತ ಸತತವಾಗಿ 5 ವರ್ಷಗಳಿಂದ ರೈತರ ಬೆವರ ಹನಿಯನ್ನು ಕಸಿಯುತ್ತಿರುವ ನಕಲಿ ಬಿತ್ತನೆ ಬೀಜ, ಕೀಟನಾಶಕಗಳ ಹಾವಳಿ ಹೆಚ್ಚಾಗಿದ್ದರೂ ಸಂಬಂಧಪಟ್ಟ ಕೃಷಿ ತೋಟಗಾರಿಕೆ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ. ರೈತ ದೂರು ಕೊಟ್ಟರೆ ಮಾತ್ರ ನೆಪ ಮಾತ್ರಕ್ಕೆ ವಿಜ್ಞಾನಿಗಳನ್ನು ತರಿಸಿ ರೈತರ ಮೇಲೆ ಆರೋಪ ಮಾಡಿ ನಕಲಿ ಕಂಪನಿಗಳಿಗೆ ಗುಣಮಟ್ಟದ ಪ್ರಮಾಣ ಪತ್ರ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಜಿಲ್ಲೆಯ ರೈತರ ಪಾಲಿಗೆ ಕೆಸಿವ್ಯಾಲಿ ವರದಾನವೋ ಶಾಪವೋ ಗೊತ್ತಿಲ್ಲ. ಆದರೆ, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆಯುತ್ತಿರುವ ಟೊಮೇಟೊ ಕ್ಯಾಪ್ಸಿಕಂ ಬೆಳೆಗಳಿಗೆ ಬಾಧಿಸುತ್ತಿರುವ ಬಿಂಗಿರೋಗ, ರೋಸ್, ನುಸಿ, ಅಂಗಮಾರಿ ರೋಗಗಳಿಗೆ ಲಕ್ಷಾಂತರ ಔಷಧಿ ಖರೀದಿ ಮಾಡಿ ಸಿಂಪಡಣೆ ಮಾಡಿದರು ಕನಿಷ್ಠ ತೋಟದ ಮೇಲಿರುವ ಸೊಳ್ಳೆ ಸಹ ಸಾಯುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಕಳಪೆಯಾಗಿದ್ದರೂ ಗುಣಮಟ್ಟ ಪರಿಶೀಲನೆ ಮಾಡಬೇಕಾದ ಅಧಿಕಾರಿಗಳು ನಕಲಿ ಕಂಪನಿಗಳ ಜೊತೆ ಶಾಮೀಲಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ 3,800 ಹೊರರಾಜ್ಯದ ಔಷಧಿ ಕಂಪನಿಗಳು 1800 ಮಾರಾಟಗಾರರು 480 ಪ್ರಜ್ಞಾವಂತ ಯುವಕರು ವಿವಿಧ ರೋಗಗಳ ನಿಯಂತ್ರಣ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರೂ ಯಾವುದೇ ಔಷಧಿಯಿಂದ ರೋಗ ನಿಯಂತ್ರಣ ಬರುತ್ತಿಲ್ಲ. ಸಂಬಂಧಪಟ್ಟ ತೋಟಗಾರಿಕೆ, ಕೃಷಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ನುಣುಚಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಜಿಲ್ಲಾದ್ಯಂತ ನಾಯಿಕೊಡೆಗಳಂತೆ ತಲೆ ಎತ್ತಿರುವ ನೂರಾರು ನರ್ಸರಿಗಳು ರೈತರಿಗೆ ಬಿಲ್ ನೀಡದೆ ವಂಚನೆ ಮಾಡುತ್ತಿದ್ದಾರೆ. ತೋಟಗಾರಿಕೆ ಅಧಿಕಾರಿಗಳನ್ನು ಕೇಳಿದರೆ ನಮ್ಮ ಇಲಾಖೆಯಿಂದ ಪರವಾನಗಿ ಪಡೆದಿಲ್ಲವೆಂದು ಹಿಂಬದಿಯಿಂದ ಎಲ್ಲಾ ತರಹದ ಸರ್ಕಾರದ ಅನುದಾನಗಳನ್ನು ನರ್ಸರಿ ಮಾಲೀಕರಿಗೆ ನೀಡುತ್ತಿದ್ದಾರೆಂದು ಕಿಡಿಕಾರಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, 2 ತಿಂಗಳ ಹಿಂದೆ ಇಡೀ ದೇಶದಲ್ಲಿಯೇ ಬಾರೀ ಸದ್ದು ಮಾಡಿದ್ದ ಟೊಮೇಟೊ ಬೆಲೆ ಹಾಗೂ ಹೂ ಬೆಳೆಗಳು ಪಾತಾಳಕ್ಕೆ ಕುಸಿದಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ರೈತ ಬೆಲೆಯಿಲ್ಲದೆ ರಸ್ತೆಗಳಲ್ಲಿ ಸುರಿಯಬೇಕಾದ ಪರಿಸ್ಥಿತಿ ಇರುವುದರಿಂದ ಸರ್ಕಾರ ಜಿಲ್ಲಾಡಳಿತದಿಂದ ಬೆಳೆ ನಷ್ಟದ ವರದಿ ತರಿಸಿಕೊಂಡು ಕನಿಷ್ಠ ಪ್ರತಿ ಕೆಜಿ ಟೊಮೇಟೊ ಹಾಗೂ ಹೂವಿಗೆ 10ರೂ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ನರ್ಸರಿಗಳು ತೋಟಗಾರಿಕೆ ಹಿಡಿತದಲ್ಲೂ ಇಲ್ಲದೆ ಕೃಷಿ ಇಲಾಖೆಯ ಹಿಡಿತದಲ್ಲೂ ಇಲ್ಲದೆ ಇರುವುದರಿಂದ ಯಾರ ಹಿಡಿತಕ್ಕೂ ಸಿಗದೆ ರೈತರು ನಷ್ಟವಾದಾಗ ಯಾರನ್ನೂ ಕೇಳಬೇಕೆಂಬ ಪ್ರಶ್ನೇ ಮೂಡಿದೆ. ಕೂಡಲೇ ರಾಜ್ಯದಲ್ಲಿ ನರ್ಸರಿ ಕಾಯ್ದೆಯನ್ನು ಜಾರಿಗೆ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ತೀವ್ರವಾದ ಬರಗಾಲ ಆವರಿಸಿರುವ ಕಾರಣ ಕೋಲಾರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ ಬರ ನಿರ್ವಹಣೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ನೀರು, ಮೇವು ಸಮಸ್ಯೆಯಾಗದಂತೆ ಜಾಗೃತಿವಹಿಸಿ ಜಾನುವಾರುಗಳ ರಕ್ಷಣೆಗೆ ಪ್ರತಿ ಪಂಚಾಯಿತಿಗೊಂದು ಗೋಶಾಲೆ ತೆರೆಯಬೇಕು.
ಮಾನ್ಯರು ಈ ಮೇಲ್ಕಂಡ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ರೈತರ ಸಮಸ್ಯೆಗಳಿಗೆ ತೋಟಗಾರಿಕೆ ಕೃಷಿ ಅಧಿಕಾರಿಗಳು ಸ್ಪಂದಿಸಿ ನಕಲಿ ಬಿತ್ತನೆ ಬೀಜ ಕೀಟನಾಶಕಗಳ ಹಾವಳಿಯಿಂದ ತತ್ತರಿಸಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಸಚಿವರಾದ ಚೆಲುವರಾಯಸ್ವಾಮಿಯವರು, ನಕಲಿ ಬಿತ್ತನೆ ಬೀಜ, ಕೀಟನಾಶಕಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕಾನೂನು ರಚನೆಗೆ ಚರ್ಚೆಯಾಗುತ್ತಿದೆ. ನರ್ಸರಿ ಕಾಯ್ದೆಯನ್ನು ಜಾರಿಗೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ.ಜೊತೆಗೆ ಬರ ನಿರ್ವಹಣೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಸಮಸ್ಯೆ ನಿಭಾಯಿಸಲು ಜಿಲ್ಲಾಧಿಕಾರಿಗೆ ಆದೇಶ ಮಾಡುವ ಜೊತೆಗೆ ಹೂವು ಮತ್ತು ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಫಾರೂಖ್ ಪಾಷ, ಬಂಗಾರಿ ಮಂಜು, ರಾಜೇಶ್, ವಿಜಯ್ ಪಾಲ್, ಭಾಸ್ಕರ್, ಸುನೀಲ್ ಕುಮಾರ್, ಮಂಗಸಂದ್ರ ನಾಗೇಶ್, ಪೆಮ್ಮದೊಡ್ಡಿ ಯಲ್ಲಣ್ಣ, ಹರೀಶ್, ತೆರ್ನಹಳ್ಳಿ ಆಂಜಿನಪ್ಪ, ವೆಂಕಟೇಶಪ್ಪ, ನರಸಿಂಹಯ್ಯ ಸುಪ್ರೀಂ ಚಲ, ಮೂರಾಂಡಹಳ್ಳಿ ಶಿವಾರೆಡ್ಡಿ, ಕದರಿನತ್ತ ಅಪ್ಪೋಜಿರಾವ್, ಕಿರಣ್, ನಾಗೇಶ್, ರಾಮಸಾಗರ ವೇಣು, ಸುರೇಶ್ ಬಾಬು, ಮುಂತಾದವರಿದ್ದರು.