ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳು ಜನರಲ್ಲಿ ಜೀವ ವಿಮೆ ಕಾಡಿಸಬೇಕಾದ ಅಗತ್ಯ ಕುರಿತು ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ವಿಮೆ ಮಾಡಿಸುವಂತೆ ಪ್ರೇರೇಪಿಸಬೇಕು ಎಂದು ತಾಲ್ಲೂಕು ಎಲ್‍ಐಸಿ ಶಾಖೆಯ ಹಿರಿಯ ವ್ಯವಸ್ಥಾಪಕ ಸಿದ್ದೇಶ್ ಹೇಳಿದರು.
ಪಟ್ಟಣದ ಎಲ್‍ಐಸಿ ಕಚೇರಿ ಸಭಾಗಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಎಲ್‍ಐಸಿ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿ, ಆರೋಗ್ಯ ವಿಮಾ ಸೌಲಭ್ಯ, ಜನಾರೋಗ್ಯ ಕ್ಷೇತ್ರದಲ್ಲಿ ಮಹತ್ವ ಪಡೆದಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಜೀವ ವಿಮೆ ಮಾಡಿಸುವ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾದ ಅಗತ್ಯವಿದೆ. ಆರ್ಥಿಕ ಸಮಸ್ಯೆಗಳು ಗ್ರಾಮೀಣ ಜನರನ್ನು ಕಾಡುತ್ತಿವೆ. ಅದಕ್ಕೆ ವಿಮಾ ಪಾಲಿಸಿ ಪರಿಹಾರವಾಗಬಲ್ಲದು. ಎಲ್‍ಐಸಿ ಅಗತ್ಯುತ್ತಮ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರ ಪೂರ್ಣ ಪ್ರಯೋಜನ ಅರ್ಹರಿಗೆ ದೊರೆಯುವಂತೆ ಮಾಡಲು ಪ್ರತಿನಿಧಿಗಳು ಶ್ರಮ ವಹಿಸಬೇಕು ಎಂದು ಹೇಳಿದರು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಕೆ.ಕುಲಕರ್ಣಿ ಮಾತನಾಡಿ, ಭಾರತೀಯ ಜೀವ ವಿಮಾ ಕಂಪನಿ ದೇಶದ ಅತಿ ದೊಡ್ಡ ಆರ್ಥಿಕ ಸಂಸ್ಥೆಯಾಗಿದೆ. ಅದು ದೇಶದ ಆರ್ಥಿಕಾಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ. ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ತಾಲ್ಲೂಕು ಜೀೀವ ವಿಮಾ ನಿಗಮದ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.