ಕುಂದಾಪುರ: ಡಿ.9: ಹಿರಿಯ ರಂಗ ಕಲಾವಿದ ಕುಂದಾಪುರದ “ರೂಪಕಲಾ” ಹಾಗೂ “ಮೂರು ಮುತ್ತು” ತಂಡದ ಪ್ರಮುಖ ನಟ ಅಶೋಕ ಶ್ಯಾನುಭಾಗ (54) ಡಿ. 8 ರಂದು ನಿಧನರಾದರು.
ಬಾಲ್ಯದಿಂದಲೇ ಹಿರಿಯ ರಂಗ ಕಲಾವಿದ ಕೆ. ಬಾಲಕೃಷ್ಣ ಪೈ ಯಾನೆ ಕುಳ್ಳಪ್ಪು ಅವರ ನಾಟಕ ತಂಡದ ಸದಸ್ಯನಾಗಿ ಅವರ ಪುತ್ರರಾದ ಸತೀಶ್ ಪೈ ಹಾಗೂ ಸಂತೋಷ ಪೈಯವರೊಂದಿಗೆ ಅಭಿನಯಿಸುತ್ತಿದ್ದರು. ಇವರ ತಂದೆ ನಾರಾಯಣ ಶ್ಯಾನುಭಾಗ ಪ್ರಖ್ಯಾತ ಕಲಾವಿದರಾಗಿದ್ದು, ರೂಪಕಲಾ ಸಂಸ್ಥೆಯಲ್ಲಿ ಹರಿಶ್ಚಂದ್ರ, ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಅಶೋಕ ಶ್ಯಾನುಭಾಗ ತಂದೆಯೊಂದಿಗೆ ನಾಟಕದಲ್ಲಿ ಪಾಲ್ಗೊಳ್ಳುತ್ತಿದ್ದರು. 1979ರಲ್ಲಿ ರೂಪಕಲಾ ಸಂಸ್ಥೆಯಲ್ಲಿ ಕೆ. ಬಾಲಕೃಷ್ಣ ಪೈಯವರ ಮಾರ್ಗದರ್ಶನದಲ್ಲಿ ಅಭಿನಯಿಸುತ್ತಿದ್ದ ಅಶೋಕ ಶ್ಯಾನುಭಾಗ, ನಂತರ ಸತೀಶ ಪೈ ಅವರ ನಿರ್ದೇಶನದಲ್ಲಿ ನಿರಂತರವಾಗಿ ನಾಟಕದ ಪ್ರಮುಖ ಪಾತ್ರಧಾರಿಯಾಗಿ ಪಾಲ್ಗೊಳ್ಳುತ್ತಾ ನಾಲ್ಕು ದಶಕಗಳ ಕಾಲ ರಂಗಭೂಮಿಯನ್ನೇ ಬದುಕಿನ ಭಾಗವಾಗಿಸಿಕೊಂಡಿದ್ದರು.
ಅಶೋಕ ಶ್ಯಾನುಭಾಗ, ಸತೀಶ ಪೈ, ಸಂತೋಷ ಪೈ ಸಹೋದರರೊಂದಿಗೆ ಮೂರು ಮುತ್ತು, ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಸಹಿತಯ ಹಲವಾರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. “ಮೂರು ಮುತ್ತು”ವಿನಲ್ಲಿ ಒಂದು “ಮುತ್ತು” ಆಗಿ ಬಹಳ ಜನಪ್ರಿಯರಾಗಿದ್ದರು. “ಮೂರು ಮುತ್ತು” ಮೂರು ದಶಕಗಳಿಂದ ಪ್ರದರ್ಶನಗೊಳ್ಳುತ್ತಿದ್ದು, ಇವರ ಕೀಂ ಕೀಂ ರಾಮನಾಥ ಪಾತ್ರ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತಿತ್ತು.
ಉಡುಪಿ ಜಿಲ್ಲೆಯಲ್ಲದೇ ಉತ್ತರ ಕನ್ನಡ ಭಾಗದಲ್ಲಿ ಇವರು ತಮ್ಮ ಪ್ರತಿಭೆಯಿಂದ ಬಹಳ ಜನಮನ್ನಣೆ ಪಡೆದಿದ್ದರು. ವಿದೇಶದಲ್ಲಿಯೂ ಹತ್ತಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಪಾಲ್ಗೊಂಡು ಅಭಿನಂದಿಸಲ್ಪಟ್ಟಿದ್ದರು. ಕಲರ್ಸ್ ಕನ್ನಡ, ಮಜಾ ಟಾಕೀಸ್ ಟಿವಿ ಶೋಗಳಲ್ಲೂ ಅಶೋಕ ಶ್ಯಾನುಭಾಗ ಅವರು ಮೂರು ಸಲ ಸತೀಶ ಪೈ, ಸಂತೋಷ ಪೈ ಅವರೊಂದಿಗೆ ರೂಪಕದಲ್ಲಿ ಅಭಿನಯಿಸಿ ನಗಿಸಿದ್ದಾರೆ.
ಇವರು ಪತ್ನಿ ಪ್ರಾಧ್ಯಾಪಕಿ, ಖ್ಯಾತ ಹಿರಿಯ ಲೇಖಕಿ ಸುಮತಿ ಶೆಣೈ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಅಶೋಕ ಶ್ಯಾನುಭಾಗರ ನಿಧನದ ಸುದ್ದಿ ತಿಳಿದು ನೂರಾರು ಮಂದಿ ದಿನಾಂಕ 9ರಂದು ಮುಂಜಾನೆ ಅವರ ಮನೆಗೆ ಧಾವಿಸಿ ಶ್ರದ್ಧಾಂಜಲಿ ಅರ್ಪಿಸಿದ್ದರು.