

ಕೋಲಾರ,ಮಾ.17: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೆ.ಯು.ಡಬ್ಲ್ಯೂ.ಜೆ ಸಂಸ್ಥಾಪಕ ಡಿ.ವಿ.ಗುಂಡಪ್ಪ (ಡಿ.ವಿ.ಜಿ) ಅವರ ಜಯಂತಿಯನ್ನು ನಗರದ ಪತ್ರಕರ್ತರ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ಸೋಮವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರು ಡಿವಿಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸ್ಮರಿಸಿದರು.
ಡಿವಿಜಿ ಅವರ ಪ್ರಸಿದ್ಧ “ಮಂಕುತಿಮ್ಮನ ಕಗ್ಗ” ಸಾಹಿತ್ಯದ ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆಟ ಬೆಲ್ಲ-ಸಕ್ಕರೆಯಾಗು ದೀನದುರ್ಬಲರಿಂಗೆಟ ಎಲ್ಲರೊಳಗೊಂದಾಗು ಮಂಕುತಿಮ್ಮ ಸೇರಿದಂತೆ ಕೆಲ ಸಾಲುಗಳನ್ನು ವಾಚನ ಮಾಡಿ ಅರ್ಥ ತಿಳಿದುಕೊಳ್ಳಲಾಯಿತು.
ಪತ್ರಕರ್ತ ಕೆ.ಓಂಕಾರ ಮೂರ್ತಿ ಮಾತನಾಡಿ, ಮನಸ್ಸಿನಲ್ಲಿ ಮೂಡುವ ಸಾವಿರಾರು ಪದಗಳನ್ನು ಡಿವಿಜಿ ಕೇವಲ ಮೂರು ಸಾಲಿನಲ್ಲಿ ಕಟ್ಟಿಕೊಡುತ್ತಿದ್ದರು. ಪತ್ರಕರ್ತರಾಗಿ, ಸಾಹಿತಿ, ಕವಿಯಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಅವರು ಕೋಲಾರ ಜಿಲ್ಲೆಯವರು ಎಂಬುದು ನಮ್ಮೆಲ್ಲರ ಹೆಮ್ಮೆ. ಅವರು ಸ್ಥಾಪಿಸಿದ ಸಂಘ ಇಂದು ಉತ್ತಮ ಕೆಲಸಗಳಲ್ಲಿ ತೊಡಗಿದೆ. ಮತ್ತಷ್ಟು ಉತ್ತಮ ಕೆಲಸಗಳ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ. ಅವರ ಸಾಹಿತ್ಯವನ್ನು ಪತ್ರಕರ್ತರು ಓದಿ ಅರ್ಥೈಸಿಕೊಳ್ಳಬೇಕು ಎಂದ ಅವರು, ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಜನಪ್ರಿಯ ಕೃತಿ. ಇಂದಿಗೂ ಎಂದೆಂದಿಗೂ ಅನ್ವಯ ಆಗುವ ಕೃತಿ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್ ಮತ್ತು ವಿ.ಮುನಿರಾಜು, ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಸಿ.ವಿ.ನಾಗರಾಜ್, ಬಿ.ಸುರೇಶ್, ಎಂ.ಡಿ.ಚಾಂದ್ಪಾಷ, ಸಚ್ಚಿದಾನಂದ, ಸರ್ವಜ್ಞಮೂರ್ತಿ, ಆಸಿಫ್ ಪಾಷ, ಸ್ಕಂದಕುಮಾರ್, ಕೆ.ಎಸ್.ಸುದರ್ಶನ್, ಎನ್.ಸತೀಶ್, ಮಾಮಿ ಪ್ರಕಾಶ್, ಶಮ್ಗರ್, ಸುನೀಲ್, ವಿಜಿಕುಮಾರ್, ಗೋಪಿ, ಕಾಂಗ್ರೆಸ್ ಮುಖಂಡ ಕೆ.ಜಯದೇವ ಹಾಗೂ ಪತ್ರಕರ್ತರು ಇದ್ದರು.
