ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ : ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾದ ಕೆಲಸಗಳನ್ನು ಒಂದೇ ದಿನದಲ್ಲಿ ಪರಿಹಾರ ನೀಡುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜನಪರ ಕಾಳಜಿಯನ್ನು ಹೊಂದಿದೆ . ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋಲಾರ ತಾಲ್ಲೂಕು ತಹಸೀಲ್ದಾರರಾದ ಶೋಭಿತಾ ಅವರು ತಿಳಿಸಿದರು . ಇಂದು ನಗರದ ವಕ್ಕಲೇರಿ ಹೋಬಳಿಯ ಶೆಟ್ಟಿಗಾನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು . 15 ದಿನಗಳಿಂದ ಇಲ್ಲಿನ ಜನರ ಸಮಸ್ಯೆಗಳನ್ನು , ಪರಿಸ್ಥಿತಿಗಳನ್ನು ಅವಲೋಕನ ಮಾಡಿ , ಈ ಹಳ್ಳಿಯಲ್ಲಿ ಕೆಲಸ ಮಾಡುವ ಅವಕಾಶಗಳಿವೆ ಎಂದು ಪರಿಗಣಿಸಿ ಗ್ರಾಮವನ್ನು ಗ್ರಾಮವಾಸ್ತವ್ಯಕ್ಕೆ ಸೂಕ್ತವೆಂದು ಆಯ್ಕೆ ಮಾಡಿಕೊಂಡಿರುತ್ತೇವೆ . ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಚೇರಿ ಹಾಗೂ ಭವನಗಳಿಗೆ ಭೇಟಿ ನೀಡಿದ್ದೇವೆ . ಸಾಕಷ್ಟು ಅರ್ಜಿಗಳು ಕೂಡ ನಮಗೆ ಸಾರ್ವಜನಿಕರಿಂದ ಬಂದಿದೆ . 55 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ್ದೇವೆ . ಜನರ ಕುಂದು ಕೊರತೆ ಕೇಳುವುದಕ್ಕೆ ಇದೊಂದು ಮುಖ್ಯವಾದ ಕಾರ್ಯಕ್ರಮವಾಗಿದ್ದು , ಕಚೇರಿಗಳಿಗೆ ಸಮಸ್ಯೆಗಳನ್ನು ಹೊತ್ತು ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸುವ ಕಾರಣದಿಂದಲೇ ಎಲ್ಲಾ ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಬೇಕು . ತಮ್ಮ ಹಳ್ಳಿಗೆ ಬಂದು ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವಂತೆ ಮಾಡಲಾಗಿದೆ ಎಂದರು . ಗ್ರಾಮದಲ್ಲಿ ಪಶುಸಂಗೋಪನೆ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಭಿಯಾನವನ್ನು ಮಾಡಿದ್ದೇವೆ . ವಾಸನ್ ಐ ವತಿಯಿಂದ ಕಣ್ಣಿನ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ . ಈ ಎಲ್ಲಾ ಅವಕಾಶಗಳನ್ನು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕು . ಕೃಷಿ ಇಲಾಖೆಯಿಂದ ಕೆಲವೊಂದು ಸಾಧನ – ಸಲಕರಣೆಗಳನ್ನು ರೈತರಿಗೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ . ಗ್ರಾಮದಲ್ಲಿ ಏನೇ ಕುಂದು ಕೊರತೆಗಳಿದ್ದರು ಅದನ್ನು ಪರಿಗಣಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಡುವ ಜವಾಬ್ದಾರಿ ನಮ್ಮೆಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳದ್ದಾಗಿರುತ್ತದೆ ಎಂದು ಭರವಸೆ ನೀಡಿದರು . ತಹಶಿಲ್ದಾರಿಗೆ ಸಾರ್ವಜನಿಕರಿಂದ ಸ್ಮಶಾನ ಒತ್ತುವರಿ ತೆರವು , ಗುಂಡುತೋಪು ಒತ್ತುವರಿ ತೆರವು , ರಸ್ತೆ ನಿರ್ಮಾಣ , ಖಾತೆ ಬದಲಾವಣೆ , ವಸತಿ ಯೋಜನೆಯಡಿ ನಿವೇಶನ , ಮನೆ ನಿರ್ಮಾಣ ಮಾಡಿಕೊಡುವಂತೆ , ವೃದ್ಧಾಪ್ಯ ವೇತನ ನೀಡುವಂತೆ ಹಾಗೂ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಮನವಿಗಳನ್ನು ಸಲ್ಲಿಸಿದರು . ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ಅವರು ಮಾತನಾಡಿ , ಕರೋನ ಎಂಬ ಸೂಕ್ಷ್ಮ ಜೀವಿ ಜನರ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿತ್ತು . ಈಗ ಅದಕ್ಕೆ ಔಷದಿ ಕಂಡುಹಿಡಿಯಲಾಗಿದೆ . 60 ವರ್ಷ ಮೇಲ್ಪಟ್ಟ ಎಲ್ಲರೂ ಚಿಕಿತ್ಸೆ ಪಡೆಯಿರಿ . ಚಿಕಿತ್ಸೆ ಪಡೆದು ನಂತರವೂ ಕರೋನ ಬಂದರೆ ವಾಸಿಯಾಗುತ್ತದೆ ಹಾಗೂ ನಿಮ್ಮ ಮೂಲಕ ಇನ್ನೊಬ್ಬರಿಗೆ ಹರಡುವುದಿಲ್ಲ . ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಿಸಿಕೊಳ್ಳಿ , ಮಣ್ಣಿನ ಪರೀಕ್ಷೆ ಮಾಡಿಸಿ ಇದರಿಂದ ಯಾವ ಬೆಳೆ ಸೂಕ್ತ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ . ರೇಷ್ಮೆಯನ್ನು ಪ್ರಪಂಚದಲ್ಲಿ ಭಾರತ ಮತ್ತು ಚೀನಾದಲ್ಲಿ ಮಾತ್ರ ಬೆಳೆಯಲಾಗುತ್ತದೆ . ದೇಶದಲ್ಲಿ ಮುಂದಿನ ದಿನಗಳಲ್ಲಿ ರೇಷ್ಮೆಗೆ ಉತ್ತಮ ಭವಿಷ್ಯವಿದೆ . ರೇಷ್ಮೆ ಗಿಡವನ್ನು ಉಚಿತವಾಗಿ ನೀಡಲಾಗುವುದು ಹಾಗೂ ನರೇಗಾ ಯೋಜನೆಯಲ್ಲಿ ಮೂರು ವರ್ಷ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು . ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರಮೇಶ್ ಅವರು ಮಾತನಾಡಿ , ಈ ಗ್ರಾಮದಲ್ಲಿ 6 ಭಾಗ್ಯಲಕ್ಷ್ಮಿ ಬಾಂಡ್ ಗಳನ್ನು ಈ ನೀಡಲಾಗಿದೆ . 6 ಹೊಸ ಅರ್ಜಿ ಸ್ವೀಕಾರ ಮಾಡಿದ್ದೇವೆ . ಗರ್ಭಿಣಿಯಾದ ಮಹಿಳೆಯರಿಗೆ ಮೊದಲ ಬಾರಿಗೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ 5000 ರೂಗಳನ್ನು ನೀಡಲಾಗುತ್ತದೆ . ಕರೋನ ಇರುವುದರಿಂದ ಗರ್ಭಿಣಿಯರಿಗೆ ಮಕ್ಕಳಿಗೆ ಮನೆಮನೆಗೆ ಆಹಾರ ಪದಾರ್ಥವನ್ನು ವಿತರಿಸಲಾಗುತ್ತಿದೆ . ಶೇಕಡ ತೊಂಬತ್ತರಷ್ಟು ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ . ಮಕ್ಕಳಿಗೆ ಉತ್ತಮವಿದ್ಯಾಭ್ಯಾಸ ಕೊಡಿಸಿ , ಮಹಿಳೆಯರು ಸ್ತ್ರೀ ಶಕ್ತಿ ಸಂಘಗಳ ಮೂಲಕ ಬ್ಯಾಂಕ್ ಮೂಲಕ ಸಾಲ ಪಡೆದು ವಿವಿಧ ಕೆಲಸಗಳಲ್ಲಿ ತೊಡಗಿಕೊಂಡು ಸ್ವಾವಲಂಬಿಗಳಾಗಿದ್ದಾರೆ ಎಂದು ತಿಳಿಸಿದರು , ಕಾರ್ಯಕ್ರಮದಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಹನುಮಂತರಾಯಪ್ಪ , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜ್ ಗೌಡ , ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರಮ್ಯಾ ದೀಪಿಕಾ , ತಾಲ್ಲೂಕು ಕಾರ್ಯನಿರ್ವಾಹಕರಾದ ಬಾಬು , ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸುನಿತಾ , ಗ್ರಾಮಲೆಕ್ಕಾಧಿಕಾರಿಗಳಾದ ರಾಹುಲ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು .