ಕಳಪೆ ರೇಷ್ಮೆ ಹುಳ ವಿತರಣೆಯಿಂದ ನಷ್ಟವಾಗಿರುವ ರೈತರಿಗೆ ಪ್ರ ಪರಿಹಾರ, ದುಬಾರಿ ಚಾಕಿ ಹುಳ ಬೆಲೆ ನಿಯಂತ್ರಣಕ್ಕೆ ಒತ್ತಾಯ

ಕೋಲಾರ ಜೂ.16: ಕಳಪೆ ರೇಷ್ಮೆ ಹುಳ ವಿತರಣೆಯಿಂದ ನಷ್ಟವಾಗಿರುವ ರೈತರಿಗೆ ಪ್ರತಿ 100 ಮೊಟ್ಟೆಗೆ 1 ಲಕ್ಷ ಪರಿಹಾರ ಜೊತೆಗೆ ದುಬಾರಿ ಚಾಕಿ ಹುಳ ಬೆಲೆ ನಿಯಂತ್ರಣಕ್ಕೆ ತಂಡ ರಚನೆ ಮಾಡಿ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ರೇಷ್ಮೆ ಸಚಿವರನ್ನು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯ ಮಾಡಿದರು.
ಕಳಪೆ ರೇಷ್ಮೆ ಹುಳ ವಿತರಣೆಯಿಂದ ನಷ್ಟವಾಗಿರುವ ವರದೇನಹಳ್ಳಿ ರೈತ ರಮೇಶ್ ಅವರ ಹುಳ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಟೊಮೇಟೊ ಮಾವಿಗೆ ರೋಗ ಬಾಧೆ, ಹೈನೋದ್ಯಮಕ್ಕೆ ಕಲಬೆರಕೆ ಬಾಧೆ, ಇದರ ಮಧ್ಯೆ ಬದುಕು ಕಟ್ಟಿಕೊಳ್ಳುತ್ತಿರುವ ಲಕ್ಷಾಂತರ ರೈತ ಕುಟುಂಬಗಳಿಗೆ ಜೀವನಾಧಾರವಾಗಿದ್ದ ರೇಷ್ಮೆ ಬೆಲೆ ಕುಸಿತದ ಜೊತೆಗೆ ದುಬಾರಿ ಚಾಕಿ ಹುಳದ ನಿಯಂತ್ರಣವಿಲ್ಲದೆ ಕಳಪೆ ಹುಳವನ್ನು ವಿತರಣೆ ಮಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ರೇಷ್ಮೆ ಇಲಾಖೆ ವಿಫಲವಾಗಿದೆ ಎಂದು ಆರೋಪ ಮಾಡಿದರು.
ಕೋಲಾರ ತಾಲೂಕು ಕಸಬಾ ಹೋಬಳಿ ವರದೇನಹಳ್ಳಿ ಗ್ರಾಮದ ರೈತ ರಮೇಶ್ 150 ಮೊಟ್ಟೆಯನ್ನು ಖಾಸಗಿ ಚಾಕಿ ಸಾಕಾಣಿಕ ಕೇಂದ್ರದಲ್ಲಿ ಪ್ರತಿ 100 ಮೊಟ್ಟೆಗೆ 6,500 ರೂಗಳಂತೆ 9 ಸಾವಿರ ಕೊಟ್ಟು 150 ಮೊಟ್ಟೆ ಹುಳವನ್ನು ತಂದು ಕೊಂಡ ಸೊಪ್ಪಿನಲ್ಲಿ ಸಾಕಾಣಿಕೆ ಮಾಡಿ 4ನೇ ಹಂತದ ನಂತರ 15 ದಿನಗಳಾದರೂ ಇದುವರೆಗೂ ಹಣ್ಣಾಗದೆ ರೈತ ಕಂಗಾಲಾಗಿದ್ದಾನ.
ರೇಷ್ಮೆ ಅಧಿಕಾರಿಗಳನ್ನು ಕೇಳಿದರೆ ಸೊಪ್ಪಿನಲ್ಲಿ ವಿಷದ ಅಂಶ ಇಲ್ಲವೇ ಚಾಕಿ ಸಾಕಾಣಿಕ ಕೇಂದ್ರದಲ್ಲಿ ಹವಾಮಾನ ವೈಫರೀತ್ಯದಿಂದ ಹೀಗೆ ಆಗಿರಬಹುದು. ವಿಜ್ಞಾನಿಗಳು ಬಂದು ಪರಿಶೀಲನೆ ಮಾಡಿದ ನಂತರ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆಂದು ನೊಂದ ರೈತ ಕಣ್ಣೀರಾಕುತ್ತಿದ್ದಾನೆ.
ನೊಂದ ರೈತ ರಮೇಶ್ ಮಾತನಾಡಿ, ಹವಾಮಾನ ಏರಿಳಿತದಿಂದ ಕಂಗೆಟ್ಟಿರುವ ರೇಷ್ಮೆ ಕೃಷಿಕರು ತಮ್ಮಲ್ಲಿರುವ ಅಲ್ಪ ಪ್ರಮಾಣದ ನೀರಿನಲ್ಲಿ ರೇಷ್ಮೆ ಬೆಳೆದು ಬದುಕು ಕಟ್ಟಿಕೊಳ್ಳುವ ಸಮಯದಲ್ಲಿ ಬೆಲೆ ಕುಸಿತದ ಜೊತೆಗೆ ದುಬಾರಿ ಚಾಕಿ ಹುಳ ಬೆಲೆಯಿಂದ ರೈತ ಕಂಗೆಟ್ಟಿದ್ದರೆ ಮತ್ತೆ ಕಳಪೆ ಚಾಕಿ ಹುಳ ವಿತರಣೆಯಿಂದ ರೈತರು ದಿಕ್ಕು ತೋಚದಂತೆ ಹುಳ ಬೆಳೆಯಿಂದ ಲಕ್ಷಾಂತರ ರೂಪಾಯಿ ಸಾಲಗಾರರಾಗುತ್ತಿದ್ದಾರೆಂದು ಅಳಲು ತೋಡಿಕೊಂಡರು.
ಮಾರುಕಟ್ಟೆಯಲ್ಲಿ 500 ರೂಗಳಿಂದ 800 ರೂಗಳವರೆಗೆ ಇದ್ದ ರೇಷ್ಮೆ ಬೆಲೆ ಏಕಾಏಕಿ 200 ರಿಂದ 300ರೂಗೆ ಕುಸಿದಿರುವುದರಿಂದ ರೈತರಿಗೆ ಈಗಿನ ಪರಿಸ್ಥಿತಿಯಲ್ಲಿ ಅಸಲು ಸಹ ಕೈಗೆ ಸಿಗದೆ, ಮಾಡಿದ ಸಾಲ ತೀರಿಸಲಾಗದೆ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ರೇಷ್ಮೆ ಬಿಟ್ಟು ಬದುಕು ಕಟ್ಟಿಕೊಳ್ಳಲು ನಗರಗಳತ್ತ ಕೆಲಸ ಹುಡುಕಿಕೊಂಡು ವಲಸೆ ಹೋಗಬೇಕಾಗುತ್ತದೆ ಎಂದರು.
ಸರ್ಕಾರದ ರೇಷ್ಮೆ ಇಲಾಖೆಯಿಂದ ಪ್ರತಿ 100 ಮೊಟ್ಟೆಗೆ 600ರೂಪಾಯಿ, ಅದೇ ಖಾಸಗಿ ಚಾಕಿ ಸಾಕಾಣಿಕಾ ಕೇಂದ್ರದವರು ಅಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಪ್ರತಿ 100 ಮೊಟ್ಟೆ ಚಾಕಿ ಹುಳುವಿಗೆ 6000 ರೂಗಳಿಂದ 7000 ರೂಗಳವರೆಗೂ ಮಾರಾಟ ಮಾಡುವ ಮುಖಾಂತರ ಹಗಲು ದರೋಡೆ ಮಾಡುತ್ತಿದ್ದರೂ ಬೆಲೆ ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪ ಮಾಡಿದರು.
ಸರ್ಕಾರ ಕೂಡಲೇ ಕಳಪೆ ರೇಷ್ಮೆ ಹುಳದಿಂದ ನಷ್ಟವಾಗಿರುವ ಪ್ರತಿ ರೈತರ 100 ಮೊಟ್ಟೆಗೆ 1 ಲಕ್ಷ ಪರಿಹಾರ, ಬೆಲೆ ನಿಯಂತ್ರಣದ ಜೊತೆಗೆ ರೇಷ್ಮೆ ಬೆಳೆಗಾರರ ರಕ್ಷಣೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ನೊಂದ ರೈತ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಯಾರಂಘಟ್ಟ ಗಿರೀಶ್, ರೇಷ್ಮೆ ತಾಂತ್ರಿಕ ಅಧಿಕಾರಿ ಐತರಾಸನಹಳ್ಳಿ ಶ್ರೀನಿವಾಸಗೌಡ, ನೊಂದ ರೈತರು ಉಪಸ್ಥಿತರಿದ್ದರು.