

ಮುಂಬೈ: ಮುಂಗಾರು ಅಬ್ಬರ ತೀವ್ರಗೊಂಡಿದ್ದು ಆರ್ಥಿಕ ರಾಜಧಾನಿ ಮುಂಬೈನಲ್ಲಿ ಭಾರೀ ಮಳೆಯಾಗಿದೆ. ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದ್ದು, ಮೊದಲ ದಿನವೇ 107 ವರ್ಷಗಳಲ್ಲಿಯೇ ದಾಖಲೆಯೇ ದಾಖಲೆಯ ಪ್ರಮಾಣದ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಸಾಮಾನ್ಯ ಅವಧಿಗಿಂತ 16 ದಿನ ಮುಂಚಿತವಾಗಿಯೇ ನಗರಕ್ಕೆ ಮುಂಗಾರು ಎಂಟ್ರಿ ಕೊಟ್ಟಿದೆ. ಇದು ಕಳೆದ 75 ವರ್ಷಗಳಲ್ಲಿ ಅತ್ಯಂತ ವೇಗವಾಗಿ ನಗರಕ್ಕೆ ಎಂಟ್ರಿಕೊಟ್ಟ ಮುಂಗಾರು ಆಗಿದೆ. ಭಾರೀ ಮಳೆಯಾದ ಹಿನ್ನೆಲೆ ಅವಾಂತರಗಳು ಸೃಷ್ಟಿಯಾಗಿದೆ. ಮುಂಬೈನ ಕೆಇಎಂ ಆಸ್ಪತ್ರೆಗೆ ನೀರು ನುಗ್ಗಿ, ರಸ್ತೆಗಳೆಲ್ಲಾ ಜಲಾವೃತಗೊಂಡು ಜನರು ಸಂಕಷ್ಟಕ್ಕೀಡಾಗಿದ್ದಾರೆ.
107 ವರ್ಷಗಳಲ್ಲೇ ದಾಖಲೆಯ ಮಳೆ

ಮುಂಗಾರು ಪ್ರವೇಶದ ಮೊದಲ ದಿನವೇ ಮುಂಬೈ ನಗರಕ್ಕೆ 107 ವರ್ಷಗಳಲ್ಲೇ ದಾಖಲೆಯ ಮಳೆಯಾಗಿದೆ. ಇದಕ್ಕೂ ಮುನ್ನ 1918ರಲ್ಲಿ ಅತಿದೊಡ್ಡ ಮಳೆಯಾಗಿತ್ತು ಎಂದು ವರದಿಗಳಿಂದ ತಿಳಿದುಬಂದಿದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ದಾಖಲೆಗಳ ಪ್ರಕಾರ, ದಕ್ಷಿಣ ಮುಂಬೈನ ಹಲವಾರು ಭಾಗಗಳಲ್ಲಿ ಭಾನುವಾರ ತಡರಾತ್ರಿಯಿಂದಲೇ ಮಳೆ ಶುರುವಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಯವರೆಗೆ 200 ಮಿಮೀ ಮಳೆಯಾಗಿದೆ. ಕೊಲಾಬಾ ವೀಕ್ಷಣಾಲಯದಲ್ಲಿ, ಮುಂಬೈ ತನ್ನ ಅತಿ ಹೆಚ್ಚು 295 ಮಿಮೀ ಮಳೆ ದಾಖಲಿಸಿದೆ. 1918ರಲ್ಲಿ 279.4 ಮಿಮೀ ಮಳೆಯಾಗಿದ್ದು, ಈವರೆಗಿನ ದಾಖಲೆಯಾಗಿತ್ತು. ಆದರಿಂದು 107 ವರ್ಷಗಳ ದಾಖಲೆಯನ್ನ ಮುರಿದಿದೆ.





