

ಶ್ರೀನಿವಾಸಪುರ: ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಅ.22 ರಂದು ಬೆಳಿಗ್ಗೆ 11.30ಕ್ಕೆ ಆರ್‍ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಂ.ವೆಂಕಟಸ್ವಾಮಿ ಅವರನ್ನು, ಅವರ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಸಂಘಟನೆಗಳಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಮಂಡಲಿ ಸದಸ್ಯ ಡಿ.ಎಂ.ಅಂಬರೀಶ ಹೇಳಿದರು.
ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಎಂ.ವೆಂಕಟಸ್ವಾಮಿ, ತಾಲ್ಲೂಕಿನ ಮಲ್ಲಗಾನಹಳ್ಳಿ ಗ್ರಾಮದವರು. ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಂಡಳಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಡಾ. ಎಂ.ವೆಂಕಟಸ್ವಾಮಿ ಅವರನ್ನು ಜಾತ್ಯಾತೀತವಾಗಿ, ಧರ್ಮಾತೀತವಾಗಿ ಹಾಗೂ ಪಕ್ಷಾತೀತವಾಗಿ ತಾಲ್ಲೂಕು ನಾಗರಿಕರ ಪರವಾಗಿ ಸನ್ಮಾನಿಸಲಾಗುವುದು. ಅಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಮುಳಬಾಗಲು ವೃತ್ತದಲ್ಲಿ ಸ್ವಾಗತಿಸಲಾಗುವುದು. ಅಭಿನಂದನಾ ಸಮಾರಂಭಕ್ಕೆ ಬೆಳ್ಳಿ ರಥದಲ್ಲಿ ಕರೆದೊಯ್ಯಲಾಗುವುದು ಹೇಳಿದರು.
ವಿವಿಧ ಸಂಘಟನೆಗಳ ಮುಖಂಡರಾದ ಎನ್.ತಿಮ್ಮಯ್ಯ, ರಾಮಾಂಜಮ್ಮ, ಪ್ರಸನ್ನ, ವೆಂಕಟೇಶ್, ಈರಪ್ಪ, ಪಾಪಣ್ಣ, ಅರವಿಂದ್ ಇದ್ದರು.