

ಕರ್ನಾಟಕದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ, ಚಿತ್ರ ನಿರ್ದೇಶಕ, ಚಿತ್ರ ನಿರ್ಮಾಪಕ ರವಿ ಬಸ್ರೂರು ಅವರನ್ನು “ಕುಂದಪ್ರಭ” ಸಂಸ್ಥೆಯ ಆಶ್ರಯದಲ್ಲಿ ಪ್ರದಾನ ಮಾಡುವ ಕೋ. ಮ. ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಖ್ಯಾತ ಪತ್ರಕರ್ತ, ಅಂಕಣಗಾರ, ಬ್ಯಾಂಕರ್ ಹಾಗೂ ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಹೆಸರಲ್ಲಿ ಕಳೆದ 22 ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಂದಾಪುರ ಮೂಲದ ಸಾಧಕರಿಗೆ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ವರ್ಷ ಸಂಗೀತ ಕ್ಷೇತ್ರದಲ್ಲಿ ಸಾಧನೆ ಹಾಗೂ ಕುಂದ ಕನ್ನಡ ಭಾಷಾ ಅಭಿವೃದ್ಧಿಗೆ ಕೊಡುಗೆ ನೀಡಿದ ರವಿ ಬಸ್ರೂರು ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು ಎಂದು ಸಾಹಿತಿ ಕೋ. ಶಿವಾನಂದ ಕಾರಂತ ತಿಳಿಸಿದ್ದಾರೆ.
ಬಸ್ರೂರು ಗ್ರಾಮೀಣ ಪ್ರದೇಶದಲ್ಲಿ 2012ರಲ್ಲಿ “ಪಣ್ಕ ಮಕ್ಳ” ಎಂಬ ಕುಂದ ಕನ್ನಡ ಆಲ್ಬಂ ಬಿಡುಗಡೆ ಮೂಲಕ ಖ್ಯಾತರಾದ ರವಿ ಬಸ್ರೂರು ಕನ್ನಡ ಚಿತ್ರರಂಗದಲ್ಲಿ “ಉಗ್ರಂ” ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡುವ ಮೂಲಕ ರಾಜ್ಯ ಮಟ್ಟದಲ್ಲಿ ಖ್ಯಾತರಾದರು. ಹಲವಾರು ಚಲನ ಚಿತ್ರಗಳಿಗೆ ಸಂಗೀತ ನೀಡಿದ್ದರೂ ಕೆ.ಜಿ.ಎಫ್. ಇವರಿಗೆ ಹೆಚ್ಚಿನ ಖ್ಯಾತಿ ತಂದು ಕೊಟ್ಟಿತು. ಹಿಂದಿ, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ರವಿ ಬಸ್ರೂರು ತಮ್ಮ ಛಾಪು ಮೂಡಿಸಿದ್ದಾರೆ. ಕುಂದಾಪ್ರ ಕನ್ನಡಕ್ಕೆ ರವಿ ಬಸ್ರೂರು ಕೊಡುಗೆ ಅಪಾರ. ಗರ ಗರ ಮಂಡಲ, ಬಿಲಿಂಡರ್ ಮೂಲಕ ಕುಂದಾಪ್ರ ಕನ್ನಡ ಚಿತ್ರ ನಿರ್ಮಾಣ ನಿರ್ದೇಶನವನ್ನು ಮಾಡಿ ಸಂಚಲನ ಉಂಟು ಮಾಡಿದ್ದರು. ಆಮೇಲೆ ಕಟಕ, ಗಿರ್ಮಿಟ್ ಚಿತ್ರಗಳು ಬಂದವು. ಅಪ್ಪಯ್ಯ ಕಾಣಿ, “ಎಂತಾ ಚಂದ ನಮ್ಮ ಭಾಷಿ” ಸರಣಿ ಹಾಡುಗಳು ದೇಶ ವಿದೇಶದಲ್ಲಿದ್ದ ಕುಂದ ಕನ್ನಡದವರಿಗೆ ರೋಮಾಂಚನ ಉಂಟು ಮಾಡಿತ್ತು.
ಈಗ ಹುಟ್ಟೂರು ಬಸ್ರೂರಿನಲ್ಲಿ ಅತ್ಯಾಧುನಿಕ ಸ್ಟುಡಿಯೋ ನಿಮಾಣ ಮಾಡುತ್ತಿರುವ ಕನ್ನಡ ಚಿತ್ರರಂಗದ ಬಹಳ ಬೇಡಿಕೆಯ ಪ್ರತಿಭಾವಂತ ರವಿ ಬಸ್ರೂರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭ ಜನವರಿಯಲ್ಲಿ ನಡೆಯಲಿದೆ ಎಂದು “ಕುಂದಪ್ರಭ” ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ತಿಳಿಸಿದ್ದಾರೆ.