ಕೋಲಾರ:- ನಗರದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಇನ್ನೂರು ಪೋಷಕರಿಗೆ ಅಲೇಜಿಯನ್ ಇಂಡಿಯ ಲಿಮಿಟೆಡ್ ಮತ್ತು ಆರ್.ಕೆ ಫೌಂಡೇಷನ್ ಬೆಂಗಳೂರು ಇವರ ಸಹಯೋಗದಲ್ಲಿ ರೇಷನ್ ಕಿಟ್ಗಳನ್ನು ಆರ್ಕೆ.ಫೌಂಡೇಷನ್ ಸಂಸ್ಥಾಪಕಿ ಸುಮತಿ ವಿತರಿಸಿದರು.
ನಗರದ ಕಮಲಾ ಮಹಡಿ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಮಾತನಾಡಿದ ಅವರು, ನಮ್ಮ ಪೌಡೇಶನ್ ವತಿಯಿಂದ ತುಂಬಾ ಬಡತನದಲ್ಲಿರುವವರಿಗೆ ಬಟ್ಟೆ ,ಪುಸ್ತಕ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು ಹೀಗೆ ಹತ್ತು ಹಲವು ರೀತಿಯ ಸಹಾಯ ಮಾಡುತ್ತಿದ್ದು, ಇದರ ಸದುಪಯೋಗ ಪಡೆಯಲು ಮನವಿ ಮಾಡಿದರು.
ಯಾವುದೇ ಮಗುವಿನ ಕಲಿಕೆಗೆ ಬಡತನ ಅಡ್ಡಿಯಾಗಬಾರದು ಎಂಬುದೇ ನಮ್ಮ ಉದ್ದೇಶವಾಗಿದೆ ಎಂದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ, ಖಾಸಗಿ ಶಾಲೆಗಳ ಮಕ್ಕಳಿಗೆ ಸಿಗುವ ಸೌಲಭ್ಯಗಳು ಸರ್ಕಾರಿ ಶಾಲಾ ಮಕ್ಕಳಿಗೂ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ನೆರವಾಗುತ್ತಿರುವುದಾಗಿ ತಿಳಿಸಿದರು.
ಇದೀಗ ನೀಡಿರುವ ರೇಷನ್ ಕಿಟ್ ಕೇವಲ ನಿಮ್ಮಗಳ ಒಂದು ವಾರದ ಸಹಾಯ ಅಷ್ಟೆ, ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಪೆÇೀಷಕರಿಗೆ ಕಿವಿ ಮಾತು ಹೇಳಿದ ಅವರು, ಯಾವುದೇ ಮಗು ಶಾಲೆಯಿಂದ ದೂರ ಉಳಿಯಬಾರದು, ಪೋಷಕರು ಮಕ್ಕಳನ್ನು ತಪ್ಪದೇಶಾಲೆಗೆ ಕಳುಹಿಸಿ ಗೈರಾಗದಂತೆ ಎಚ್ಚರವಹಿಸಿ ಎಂದರು.
ಕಾರ್ಯಕ್ರಮದ ಆಯೋಜನೆ ಮಾಡಿದ್ದ ಶಿಕ್ಷಕ ಮುಖಂಡ ಆರ್.ವೀರಣ್ಣಗೌಡ, ಆರ್.ಕೆ.ಫೌಂಡೇಷನ್ನ ಸುಮತಿ ಮೇಡಂ ಅವರು, ಕೋಲಾರ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಅನೇಕ ರೀತಿಯ ಸಹಾಯ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಸಮವಸ್ತ್ರ ವಿಶೇಷ ಅಗತ್ಯ ಮಕ್ಕಳಿಗೆ ಬೇಕಾದ ಟ್ರೈ ಸೈಕಲ್, ವೀಲ್ಚೇರ್, ಷೂ,ವಾಟರ್ ಫಿಲ್ಟರ್ ಹೀಗೆ ಹತ್ತು ಹಲವು ರೀತಿಯ ಸಹಾಯ ಮಾಡಿದ್ದಾರೆ ಎಂದರು.
ಕೋಲಾರ ಜಿಲ್ಲೆಯ ಶೈಕ್ಷಣಿಕಾಭಿವೃದ್ದಿಗೆ ಹಾಗೂ ಸರ್ಕಾರಿ ಶಾಲೆಗಳ ಬಲವರ್ಧನೆಗೆ ನೆರವಾಗುತ್ತಿರುವ ಅವರಿಗೆ ಜಿಲ್ಲೆಯ ಶಿಕ್ಷಕರು, ಮಕ್ಕಳು,ಪೋಷಕರ ಪರವಾಗಿ ಧನ್ಯವಾದ ತಿಳಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಶಾಲೆಗಳ ಮುಖ್ಯಶಿಕ್ಷಕರಾದ ರವಿಚಂದ್ರ,ಕೋಟೇಶ್ವರ್ ,ರಾಮಪ್ಪ ,ಮುನಿಯಪ್ಪ ,ಗೌರಮ್ಮ ಮುಂತಾದ ವರು ಭಾಗವಹಿಸಿದ್ದರು.