ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ರಾಸು ವಿಮಾ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಅನುದಾನದ ಚೆಕ್ಗಳನ್ನು ಕೋವಿಡ್ ತಡೆ ನಿಯಮಾನುಸಾರ ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ತಿಳಿಸಿದ್ದಾರೆ.
ಇಷ್ಟು ದಿನ ಫಲಾನುಭವಿಗಳನ್ನು ಕ್ಯಾಂಪ್ ಕಚೇರಿಗೆ ಬರಮಾಡಿಕೊಂಡು ಸಾಮೂಹಿಕವಾಗಿ ಪರಿಹಾರದ ಚೆಕ್ ವಿತರಣೆ ಮಾಡಲಾಗುತ್ತಿತ್ತು. ಆದರೆ ಈಗ ಕೊರೊನಾ ಎರಡನೇ ಅಲೆ ತೀವ್ರವಾಗಿರುವುದರಿಂದ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ಜೀಡಿಮಾಕಲಹಳ್ಳಿ ಹಾಲು ಉತ್ಪಾಕದರ ಸಂಘದ ವ್ಯಾಪ್ತಿಯಲ್ಲಿ ಮೃತಪಟ್ಟ ಹಸುವಿನ ಮಾಲೀಕರಿಗೆ ರೂ.60 ಸಾವಿರ, ಗುಂಡಮನತ್ತ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಟ್ಟಡ ನಿರ್ಮಿಸಲು ರೂ.5 ಲಕ್ಷ, ಬೂರಗಮಾಕಲಹಳ್ಳಿ, ಮಚ್ಚುವಾರಿಪಲ್ಲಿ, ದಿಗವ ಮೊರಂಪಲ್ಲಿ, ಅರಳಕುಂಟೆ ಗ್ರಾಮದ ಸಂಘಗಳಿಗೆ ತಲಾ ರೂ. 1.50 ಲಕ್ಷದಂತೆ ರೂ. 11.60 ಲಕ್ಷ ಮೊತ್ತದ ಚೆಕ್ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಬರುವ ವರೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ತಮ್ಮ ಕೆಲಸ ಕಾರ್ಯಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸುವಂತೆ ಶಿಬಿರ ಕಚೇರಿ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ತಿಳಿಸಿದ್ದಾರೆ.