ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ ಪ್ರಮುಖ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯುವ ಮೂಲಕ ಬಿಗ್ ಬ್ರೇಕ್ ಪಡೆದುಕೊಂಡಿದೆ. ಎನ್‌ಐಎ ತಂಡ ಬಳ್ಳಾರಿಯಲ್ಲಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಈತನಿಗೂ ಸ್ಪೋಟಕ್ಕೂ ಅತ್ಯಂತ ನಿಕಟವಾದ ಸಂಬಂಧ ಇರುವುದನ್ನು ಗುರುತಿಸಿದೆ.
ಎನ್‌ಐಎ ಪೊಲೀಸರು ಈಗ ವಶಕ್ಕೆ ಪಡೆದಿರುವುದು ಬಳ್ಳಾರಿಯ ಕೌಲ್ ಬಜಾರ್ ನಿವಾಸಿಯಾಗಿರುವ ಶಬ್ಬೀರ್ ಎಂಬಾತನನ್ನು. ಶಬ್ಬೀರ್ ಬಳ್ಳಾರಿ ಖಾಸಗಿ ಕೈಗಾರಿಕೆಯಲ್ಲಿ ಎಲೆಕ್ಟ್ರಿಕಲ್ ಉದ್ಯೋಗಿಯಾಗಿದ್ದಾನೆ. ಬುಧವಾರ ಬೆಳ್ಳಂಬೆಳಗ್ಗೆ ಎನ್‌ಐಎ ತಂಡ ಆತನನ್ನು ವಶಕ್ಕೆ ಪಡೆದಿದೆ. ಬಳ್ಳಾರಿಯ ಮೋತಿ ಸಮೀಪದ ಹೊಸ ಬಸ್ ನಿಲ್ದಾಣದ ದಾರಿಯಲ್ಲಿರುವ ಮನೆಯಿಂದ ಶಬ್ಬೀರ್‌ನನ್ನು ಎನ್‌ಐಎ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಗಿದ್ದರೆ ಶಬ್ಬೀರ್‌ನನ್ನು ಯಾಕೆ ವಶಕ್ಕೆ ಪಡೆಯಲಾಗಿದೆ. ಆತನಿಗೂ ರಾಮೇಶ್ವರಂ ಕೆಫೆಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಎನ್‌ಐಎ ಮೂಲಗಳು ಉತ್ತರ ನೀಡಿವೆ. ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಉಗ್ರ ಬೆಂಗಳೂರಿನಿಂದ ತಪ್ಪಿಸಿಕೊಂಡು ತುಮಕೂರು ಮೂಲಕ ಬಳ್ಳಾರಿಗೆ ಹೋಗಿದ್ದ ಎಂದು ಹೇಳಲಾಗಿದೆ. ಆ ಸಂದರ್ಭದಲ್ಲಿ ಕೌಲ್ ಬಜಾರ್ ನಿವಾಸಿ ಶಬ್ಬೀರ್‌ನನ್ನು ಭೇಟಿ ಮಾಡಿದ್ದ ಎಂದು ಹೇಳಲಾಗಿದೆ. ಶಂಕಿತ ಉಗ್ರ ಬಳ್ಳಾರಿಗೆ ಬಂದಿದ್ದಾಗ ಆತನಿಗೆ ಹೈದರಾಬಾದ್‌ಗೆ ಹೋಗಲು ಶಬ್ಬೀರ್ ಸಹಾಯ ಮಾಡಿದ್ದ ಎಂದು ಹೇಳಲಾಗಿದೆ. ಶಂಕಿತ ಉಗ್ರ ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.