ರಮೇಶ್ ಕುಮಾರ್‌ ಪ್ರತಿಕೃತಿ ದಹನ : ಶಿಸ್ತು ಕ್ರಮ ವಜಾಕ್ಕೆ ಒತ್ತಾಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ನಾಗರೀಕ ಸಮಾಜವು ತಲೆತಗ್ಗಿಸುವಂತಹ ಮಹಿಳೆಯರ ಸ್ವಾಭಿಮಾನಕ್ಕೆ ಆತ್ಮಗೌರವಕ್ಕೆ ಧಕ್ಕೆ ಉಂಟು ಮಾಡುವ ಸದನ ಗೌರವಕ್ಕೆ ಚ್ಯುತಿ ತರುವಂತಹ “ ಅತ್ಯಾಚಾರವನ್ನು ತಡೆಯಲು ಸಾಧ್ಯವಾಗದೇ ಇದ್ದಾಗ ಸುಮ್ಮನ ಮಲಗಿ ಆನಂದಿಸಬೇಕು ” ಎಂಬ ಬಾಲಿಷ ಹೇಳಿಕೆಯನ್ನು ನೀಡಿದ ಶ್ರೀನಿವಾಸಪುರದ ಶಾಸಕ ಕೆ.ಆರ್‌.ರಮೇಶ್ ಕುಮಾರ್ ರವರ ಈ ನಡೆಯನ್ನು ಖಂಡಿಸಿ ಇವರನ್ನು ಶಿಸ್ತು ಕ್ರಮಕ್ಕೆ ಗುರಿಪಡಿಸಿ ವಜಾಗೊಳಿಸುವಂತೆ ಒತ್ತಾಯಿಸಿ ಘನವೆತ್ತ ರಾಜ್ಯಪಾಲರಿಗೆ ಕೋಲಾರದ ತಹಶೀಲ್ದಾರ್ ರವರ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿ ಭಾರತೀಯ ದಲಿತ ಸೇನೆಯ ಎಂ.ನಾರಾಯಣಸ್ವಾಮಿ ಒತ್ತಾಯಿಸಿರುತ್ತಾರೆ .
ಬಂಗಾರಪೇಟೆ ವೃತ್ತದಿಂದ ಮೆಕ್ಕೆ ವೃತ್ತದ ವರೆಗೆ ನೂರಾರು ಪ್ರತಿಭಟನಾಕಾರರೊಂದಿಗೆ ರಾಲಿ ನಡೆಸಿ , ಮೆಕ್ಕೆ ವೃತ್ತದಲ್ಲಿ ರಮೇಶ್ ಕುಮಾರ್ ರವರ ಪ್ರತಿಕೃತಿಯನ್ನು ದಹನ ಮಾಡಿ ನಂತರ ತಾಲ್ಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿರುತ್ತಾರೆ .
ನಂತರ ಮಾತನಾಡಿದ ಇವರು ಶಾಸಕ ಕೆ.ಆರ್‌.ರಮೇಶ್ ಕುಮಾರ್ ರವರು ಸಿದ್ಧಾಂತದ ಹಾಗೂ ರಾಜಕೀಯ ಪಾತಿವ್ರತ್ಯದ ಕುರಿತು ಕೇವಲ ವೇದಿಕೆಗಳಲ್ಲಿ ಮಾತ್ರ ಮಾತನಾಡುತ್ತಾರೆಯೇ ವಿನಃ ಇದನ್ನು ತಮ್ಮ ನಿಜ ಜೀವನದಲ್ಲಿ ಪಾಲಿಸುವುದಿಲ್ಲ ಎಂಬುವುದಕ್ಕೆ ಈ ಘಟನೆಯು ನಿದರ್ಶನವಾಗಿದೆ .
ಶಾಸಕರಾಗಿ ಸಭಾಧ್ಯಕ್ಷರಾಗಿ ದಶಕಗಳ ರಾಜಕೀಯ ಅನುಭವವನ್ನು ಮುತ್ಸದ್ದಿತನವನ್ನು ಹೊಂದಿರುವುದಾಗಿ ಬೀಗುತ್ತಿರುವ ಇವರು ಮಹಿಳೆಯರ ಕುರಿತು ಅತ್ಯಾಚಾರವನ್ನು ಒಂದು ಹಾಸ್ಯಾಸದ ವಸ್ತುವನ್ನಾಗಿ ಮಾಡಿ ಸದನದಲ್ಲಿ ಹೇಳಿಕೆ ನೀಡಿ ಇತರರನ್ನು ನಗಿಸುವ ಉದ್ದೇಶದಿಂದ ನೀಡಿರುವ ಹೇಳಿಕೆಯು ಇವರ ಘನತೆಗೆ ತಕ್ಕದ್ದಲ್ಲ . ಇವರ ಈ ಹೇಳಿಕೆಯು ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆಯಾಗುತ್ತದೆ ಎಂಬ ಪರಿಜ್ಞಾನವನ್ನು ಹೊಂದದೆ ನೀಡಿರುವುದು ಖಂಡನೀಯ ಎಂದಿರುತ್ತಾರೆ .
ಭಾರತೀಯ ಮಹಿಳೆಗೆ ತನ್ನ ಶೀಲ ಎಂಬುವುದು ಪ್ರಧಾನವಾದ ಅತ್ಯಮೂಲ್ಯವಾದ ಸಂಗತಿಯಾಗಿರುತ್ತದೆ . ಅತ್ಯಾಚಾರವು ಮಹಿಳೆಯರನ್ನು ಶೋಭೆಗೆ ಗುರಿಪಡಿಸುವ ಮಾನಸಿಕ ಅಘಾತಕ್ಕೆ ತಳುವ ಹೀನ ಪ್ರವೃತ್ತಿಯಾಗಿದ್ದು , ಇದನ್ನು ಅತ್ಯಾಚಾರಕ್ಕೆ ಒಳಪಡುವ ಮಹಿಳೆ ತಡೆಯಲು ಸಾಧ್ಯವಾಗದೇ ಇದ್ದಾಗ ಹೇಗೆ ತಾನೇ ಸುಮ್ಮನೆ ಮಲಗಿ ಸಂಭ್ರಮಿಸಲು ಸಾಧ್ಯ ? ಇಂತಹದನ್ನು ಊಹಿಸಲು ಸಹ ಸಾಧ್ಯವೇ ? ಇದು ಮಾನವೀಯತೆಯೇ ? ನಾಗರೀಕ ಸಮಾಜವು ಒಪುವ೦ತಹದೇ ಎಂದು ಪ್ರಶ್ನಿಸಿರುತ್ತಾರೆ .
ಇಂತಹ ಸಮಾಜ ವಿರೋಧಿ ಬಾಲಿಷ ಹೇಳಿಕೆಯನ್ನು ನೀಡಿದಂತಹ ಕೆ.ಆರ್‌.ರಮೇಶ್‌ಕುಮಾರ್ ರವರ ವಿರುದ್ಧ ಸಭಾಧಕರು ಮತ್ತು ಘನವತ ರಾಜ್ಯಪಾಲರು ಶಿಸ್ತು ಕ್ರಮವನ್ನು ತೆಗೆದುಕೊಂಡು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು .
ಕಾಂಗ್ರೆಸ್ ಪಕ್ಷವು .ಕೇವಲ ಖಂಡಿಸುವ ಹೇಳಿಕೆಗಳನ್ನು ನೀಡುತ್ತಿರುವುದಕ್ಕೆ ಸೀಮಿತವಾಗದೆ ಇವರನ್ನು ಪಕ್ಷದಿಂದ ಅಮಾನತ್ತುಪಡಿಸಿ ಶಾಸಕ ಸ್ಥಾನದಿಂದ ಉಚ್ಚಾಟನೆಗೊಳಿಸಲು ಕ್ರಮ ವಹಿಸಬೇಕು .
ಸಭಾಧ್ಯಕ್ಷರು ಮುಂದಿನ ಕಾಲಮಾನದಲ್ಲಿ ಇಂತಹ ಸಂವಿಧಾನ ವಿರೋಧಿ ಹಾಗೂ ಯಾವುದೇ ವ್ಯಕ್ತಿಗಳ ಆತ್ಮಗೌರವಕ್ಕೆ ಧಕ್ಕೆಯನ್ನು ತರುವಂತಹ ಹೇಳಿಕೆಗಳನ್ನು ನೀಡಲು ಅವಕಾಶವನ್ನು ನೀಡಬಾರದು . ಇಂತಹ ಕೃತ್ಯಗಳನ್ನು ಮಾಡುವವರ ವಿರುದ್ಧ ಎಷ್ಟೇ ದೊಡ್ಡವರಾಗಿದ್ದರೂ ತಕ್ಕ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಇತರರಿಗೆ ಒಳ್ಳೆಯ ಸಂದೇಶವನ್ನು ಸಾರುವಂತಹ ಕೆಲಸಕ್ಕೆ ಮುಂದಾಗಬೇಕೆಂದು ಒತ್ತಾಯಿಸಿರುತ್ತಾರೆ .
ಪ್ರತಿಭಟನಾ ಮೆರವಣಿಗೆಯಲ್ಲಿ ಭಾರತೀಯ ದಲಿತ ಸೇನೆಯ ಮುಖಂಡರುಗಳಾದ ಸಾಹುಕಾರ ಶಂಕರಪ ಕರಾಟೆ ಯಲ್ಲಪ್ಪ , ಮಾಹಿತಿ ಮಂಜು , ಗಾಂಧಿನಗರ ರಾಮಚಂದ್ರ ಮಹಿಳಾ ಕಾರ್ಯಕರ್ತರಾದ ರಾಧಮ್ಮ ಯಲ್ಲಮ್ಮ , ಸಾವಿತ್ರಿ , ಇನ್ನು ಮುಂತಾದವರು ಪಾಲ್ಗೊಂಡಿದರು.