ಸುಗಟೂರು ಸೊಸೈಟಿ ಆಶ್ರಯದಲ್ಲಿ 10 ಕೋ.ಸಾಲ ವಿತರಿಸಿದ ರಮೇಶ್‍ಕುಮಾರ್ : ಬಡ್ಡಿರಹಿತ 5 ಲಕ್ಷ ಸಾಲ-ರಸಗೊಬ್ಬರ ಬೆಲೆ ನಿಯಂತ್ರಣ,ರೈತರ ಹಿತ ರಕ್ಷಣೆ ಗುರಿ

ಕೋಲಾರ:- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಸಗೊಬ್ಬರ,ಕೀಟನಾಶಕಗಳ ಬೆಲೆ ನಿಯಂತ್ರಣದ ಅಧಿಕಾರ ನಮ್ಮ ಕೈಗೆ ತೆಗೆದುಕೊಂಡು ರೈತರ ಹಿತ ರಕ್ಷಣೆ ಮಾಡುತ್ತೇವೆ, ಶೂನ್ಯಬಡ್ಡಿ ಸಾಲದ ಪ್ರಮಾಣವನ್ನು 5 ಲಕ್ಷಕ್ಕೇರಿಸುತ್ತೇವೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಘೋಷಿಸಿದರು.
ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆ ಮೈದಾನದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‍ನಿಂದ ಸುಗಟೂರು ಎಸ್‍ಎಫ್‍ಸಿಎಸ್ ಆಶ್ರಯದಲ್ಲಿ 196 ಮಹಿಳಾ ಸ್ವಸಹಾಯ ಸಂಘಗಳಿಗೆ 9.80 ಕೋಟಿ ರೂ ಸಾಲ ವಿತರಿಸಿ ಅವರು ಮಾತನಾಡಿ ಮಹಿಳೆಯರಿಗೆ ನೀಡುತ್ತಿರುವ ಶೂನ್ಯ ಬಡ್ಡಿ ಸಾಲವನ್ನು 10 ಲಕ್ಷಕ್ಕೇರಿಸುವುದೇ ಗುರಿ ಎಂದರು.
ಈಗ ಉದ್ದಾರ ಆಗುತ್ತಿರೋದು ಗೊಬ್ಬರ,ಕೀಟನಾಶಕ, ಕೃಷಿಪೇಪರ್ ಮಾರಾಟಗಾರ ಮತ್ತು ಮಂಡಿ ಕಮಿಷನ್ ಏಜೆಂಟ್‍ಗಳು ಮಾತ್ರ ರೈತನ ಪರಿಸ್ಥಿತಿ ಅಧೋಗತಿಗೆ ಸಾಗುತ್ತಿದೆ, ಎಲ್ಲಿಯವರೆಗೂ ದುಡಿದು ತಿನ್ನುವ ರೈತ ಚೆನ್ನಾಗಿರೋದಿಲ್ಲವೋ ಅಲ್ಲಿಯವರೆಗೂ ದೇಶ ಉದ್ದಾರವಾಗದು ಎಂದರು.

ಗೋವಿಂದಗೌಡ ಗೈರುಅನುಮಾನಕ್ಕಡೆ


ಈ ನಡುವೆ ಸಭೆಯಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ಗೈರು ವಿವಿಧ ಅನುಮಾನಗಳಿಗೆ ಎಡೆಮಾಡಿಕೊಟ್ಟಿತಾದರೂ, ರಮೇಶ್‍ಕುಮಾರ್ ತಮ್ಮ ಭಾಷಣದಲ್ಲಿ ರೈತರು,ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ನೆರವಾಗಲು ಕಾರಣರಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮತ್ತವರ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಮಹಿಳೆಯರು ಈ ಸಾಲಕ್ಕೆ ಸೀಮಿತರಾಗದೇ ಸ್ವಯಂ ಉದ್ಯೋಗ ಬಯಸಿ ಅರ್ಜಿ ಹಾಕಿದರೆ ಅದಕ್ಕೂ ಸಾಲ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿ, ಬಡವರಿಗೆ ಅನುಕೂಲವಾಗುವಂತೆ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನು ಮೀರಿ ಅಭಿವೃದ್ದಿಪಡಿಸುವ ಆಶಯವಿದೆ ಎಂದರು.
ವಾಣಿಜ್ಯ ಬ್ಯಾಂಕುಗಳು ನಿಮಗೆ ಸಾಲ ನೀಡಲ್ಲ, ಡಿಸಿಸಿ ಬ್ಯಾಂಕ್ ಮಾತ್ರ ನಿಮ್ಮನ್ನು ಶಾಮಿಯಾನ ಹಾಕಿ ಕೂರಿಸಿ ಸಾಲ ನೀಡುತ್ತದೆ ಎಂದ ಅವರು, ಬಡವನಿಗೆ ಸಾಲ ನೀಡಲು ಹಲವು ಷರತ್ತು ಆದರೆ ಕೇಂದ್ರ ಸರ್ಕಾರ ಅದಾನಿಗೆ 1.63 ಲಕ್ಷ ಕೋಟಿ ಸಾಲ ನೀಡಿದೆ, ನಮ್ಮ ರಾಜ್ಯದ ಬಜೆಟ್ ಇರುವುದೇ 2.67 ಕೋಟಿ ಎಂದ ಅವರು, ಅಡುಗೆ ಅನಿಲ ಬೆಲೆ ಏರಿಕೆ ವಿರುದ್ದವೂ ಕಿಡಿ ಕಾರಿ ಕೇವಲ ಧರ್ಮಗಳ ನಡುವೆ ಬೆಂಕಿ ಇಡುವ ಕೆಲಸ ಮಾಡಲಾಗುತ್ತಿದೆ ಅಷ್ಟೆ ಅವರ ಸಾಧನೆ ಎಂದರು.

ಜನರಿಗಾಗಿ ದುಡಿದದ್ದಕ್ಕೆ ಕೂಲಿಯಾಗಿ ಮತ ನೀಡಿ


ವಿಧಾನಪರಿಷತ್ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‍ಕುಮಾರ್ ಮಾತನಾಡಿ, ಸುಗಟೂರು ಸೊಸೈಟಿ ಒಂದರಿಂದಲೇ 5 ಸಾವಿರ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಿದ್ದೇವೆ, ಇದಕ್ಕೆ ಕಾರಣ ರಮೇಶ್‍ಕುಮಾರ್ ಎಂದು ತಿಳಿಸಿ, ಶ್ರೀನಿವಾಸಪುರ ಕ್ಷೇತ್ರದಲ್ಲಿ ಒಂದೇ ಒಂದು ಗುಡಿಸಲು ಇಲ್ಲ, ಅತಿ ಹೆಚ್ಚು ಮನೆಗಳನ್ನು ಮಂಜೂರು ಮಾಡಿಸಿದ್ದಾರೆ ಎಂದರು.
ಪ್ರತಿ ಹಳ್ಳಿಗೂ ಶುದ್ದ ಕುಡಿಯುವ ನೀರು,ರಸ್ತೆ, ಕಾಂಕ್ರಿಟ್ ಚರಂಡಿ, ಕ್ಷೇತ್ರದಲ್ಲಿ 510 ಸಮುದಾಯ ಭವನ, ಚೇಳೂರು-ಚಿಂತಾಮಣಿ-ಕೋಲಾರದ ದ್ವಿಪಥ ರಸ್ತೆಗೆ 135 ಕೋಟಿ ಮಂಜೂರು ಮಾಡಿಸಿದ್ದು, 1380 ಕೋಟಿ ವೆಚ್ಚದಲ್ಲಿ ಕೆಸಿ ವ್ಯಾಲಿ ನೀರು ತಂದಿದ್ದರಿಂದ ಅಂತರ್ಜಲ ವೃದ್ದಿ ಹೀಗೆ ರಾಜ್ಯದ ಯಾವ ಶಾಸಕರು ಮಾಡದಷ್ಟು ಜನಪರ ಕೆಲಸ ಮಾಡಿರುವ ರಮೇಶ್‍ಕುಮಾರ್ ಅವರ ಸೇವೆಗೆ ನೀವು ನಿಮ್ಮ ಮತದ ಮೂಲಕ ಕೂಲಿ ನೀಡಬೇಕು ಎಂದು ಕೋರಿದರು.
ಮಹಿಳೆಯರಿಗೆ 50 ಸಾವಿರ ಬಡ್ಡಿರಹಿತ ಸಾಲ ನೀಡಿದ್ದು, ಉಚಿತ ಅಕ್ಕಿ ನೀಡಿದ್ದು ಸಿದ್ದರಾಮಯ್ಯ ಸರ್ಕಾರ, ಮತ್ತೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಆಗ ಸಾಲದ ಮೊತ್ತವನ್ನು 1 ಲಕ್ಷಕ್ಕೇರಿಸುವುದು ಖಚಿತ ಎಂದು ಘೋಷಿಸಿ, ಬಡ್ಡಿರಹಿತ ಸಾಲಕ್ಕೆ ಒತ್ತಡ ಹಾಕಿದ್ದೆ ರಮೇಶ್‍ಕುಮಾರ್ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ.ಕೃಷ್ಣಪ್ಪ, ಮೀಟರ್ ಬಡ್ಡಿ ಸಾಲದ ಶೋಷಣೆಯಿಂದ ಮಹಿಳೆಯರನ್ನು ರಕ್ಷಿಸುವ ಕೆಲಸ ಡಿಸಿಸಿ ಬ್ಯಾಂಕಿನಿಂದ ಆಗಿದೆ, ಜತೆಗೆ ಕೆಸಿ ವ್ಯಾಲಿ ನೀರು ತಂದ ಭಗೀರಥ ರಮೇಶ್‍ಕುಮಾರ್ ಎಂದು ಬಣ್ಣಿಸಿದರು.
ಸುಗಟೂರು ಎಸ್‍ಎಫ್‍ಸಿಎಸ್ ಅಧ್ಯಕ್ಷ ಎ.ಸಿ.ಭಾಸ್ಕರ್‍ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಭದ್ರತೆ ರಹಿತ ಸಾಲ ವಿತರಿಸಲು ದಿವಂಗತ ತಿಮ್ಮರಾಯಪ್ಪ ಅವರಿಗೆ ಧೈರ್ಯ ತುಂಬಿದ ಬ್ಯಾಲಹಳ್ಳಿ ಗೋವಿಂದಗೌಡರನ್ನು ಸ್ಮರಿಸಿ, ವೈಯಕ್ತಿಕ ಕಾರಣಗಳಿಂದ ಅವರು ಬಂದಿಲ್ಲ ಎಂದರು.
ಕಾರ್ಯಕ್ರಮದಲ್ಲಿಜಾನಪದ ಅಕಾಡೆಮಿ ಸದಸ್ಯ ರಾಜಪ್ಪ ಹಾಗೂ ಬೆಂಗಳೂರು ಉತ್ತರ ವಿವಿ ಬಿಎಡ್ ನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ನಿಖಿಲ್‍ರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ,ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಗ್ರಾ.ಪಂ ಅಧ್ಯಕ್ಷರುಗಳಾದ ಉರಿಗಿಲಿ ರಮೇಶ್,ಜನ್ನಘಟ್ಟ ಅಧ್ಯಕ್ಷ ಸತೀಶ್, ಮದನಹಳ್ಳಿ ಅಧ್ಯಕ್ಷ ನರಸಿಂಹರೆಡ್ಡಿ, ಸದಸ್ಯರಾದ ಭೂಪತಿಗೌಡ,ನವೀನ್ ಬಾಬು, ಆಲೇರಿ ಬಾಬು, ಸೊಸೈಟಿ ಉಪಾಧ್ಯಕ್ಷೆ ರುಕ್ಕಮ್ಮ , ನಿರ್ದೇಶಕರಾದ ವೆಂಕಟರಾಮರೆಡ್ಡಿ,ಗೋಪಾಲಗೌಡ,ಟಿ.ಗೋಪಾಲಪ್ಪ, ಸಿರಾಜ್, ಹನುಮೇಗೌಡ, ಸವಿತಾನಾಗೇಂದ್ರಶೆಟ್ಟಿ, ವೆಂಕಟಮ್ಮ, ರಮಣರೆಡ್ಡಿ, ಅಮರನಾರಾಯಣ, ವೆಂಕಟರಮಣಪ್ಪ, ಸಿಇಒ ಪುಟ್ಟರಾಜು, ದಿವಂಗತ ತಿಮ್ಮರಾಯಪ್ಪ ಪುತ್ರ ರಾಘವೇಂದ್ರ, ಮುನಿರಾಜು ಮತ್ತಿತರರಿದ್ದರು
.