ರೈತರೇನು ಸರ್ಕಾರದ ಕಣ್ಣಿಗೆ ಭಿಕ್ಷುಕರಂತೆ ಕಾಣುತ್ತೇವೆಯೇ? ಹೆಕ್ಟೇರ್‍ಗೆ 75 ಸಾವಿರ ಪರಿಹಾರ ನೀಡಿ-ರಮೇಶ್‍ಕುಮಾರ್ ಆಗ್ರಹ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ; ರೈತರೇನು ನಿಮ್ಮ ಕಣ್ಣಿಗೆ ಭಿಕ್ಷುಕರಂತೆ ಕಾಣುತ್ತೇವೇಯೇ, ಪರಿಹಾರ ಘೋಷಿಸುವಾಗ ಸೌಜನ್ಯಕ್ಕಾದರೂ ಕೃಷಿಕನ ಕಷ್ಟ ಆಲಿಸುವುದು ಬೇಡವೇ ಎಂದು ಪ್ರಶ್ನಿಸಿದ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಪ್ರತಿ ಹೆಕ್ಟೇರ್ ಬೆಳೆಗೆ ಕನಿಷ್ಟ 75 ಸಾವಿರ ಘೋಷಿಸುವಂತೆ ಆಗ್ರಹಿಸಿದರು.
ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಯಾರೂ ರೈತರಿಲ್ಲ, ಕೃಷಿಕನ ನೋವು ಇವರಿಗೆ ಹೇಗೆ ತಾನೇ ಅರ್ಥವಾದೀತು ಎಂದು ವಾಗ್ದಾಳಿ ನಡೆಸಿದರು.
ರೈತರ ನೋವು ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ, ಸಂಕಷ್ಟದಲ್ಲಿರುವ ಅನ್ನದಾತರನ್ನು ಸಂಪರ್ಕಿಸಿ ಅವರ ಕಷ್ಟನಷ್ಟಗಳ ಮಾಹಿತಿ ಪಡೆದು ಪ್ರತಿ ಹೆಕ್ಟೇರ್ ಬೆಳೆಗೆ 75 ಸಾವಿರ ರೂ ಘೋಷಣೆ ಮಾಡಬೇಕು ಎಂದರು.

ರೈತರ ಸಮಸ್ಯೆಗಳ ಬಗ್ಗೆ ಸೌಜನ್ಯಕ್ಕಾದರೂ ಓರ್ವ ಕೃಷಿಕನನ್ನು ಕೇಳಿಲ್ಲ, ಹೋಗಲಿ ಪರಿಸ್ಥಿತಿಗೆ ತಕ್ಕಂತೆ ಪರಿಹಾರ ನೀಡಿದ್ದಾರಾ ಅದೂ ಇಲ್ಲ, ಇವರು ನೀಡಿರುವ ಪರಿಹಾರಕ್ಕೆ ಅರ್ಥವೇ ಇಲ್ಲ ಎಂದು ಕಿಡಿಕಾರಿದರು.

ರೈತರನ್ನು ತುಚ್ಚವಾಗಿ ನೋಡುವ ಸರ್ಕಾರ

ರೈತರಿಗೆ ಮರ್ಯಾದೆ ಇಲ್ವೆ ಎಂದು ಪ್ರಶ್ನಿಸಿದ ಅವರು, ರೈತರನ್ನು ಇಷ್ಟೊಂದು ತುಚ್ಚವಾಗಿ ಯಾವುದೇ ಸರ್ಕಾರ ಕಾಣಬಾರದು. ಸರ್ಕಾರ ಆರ್ಥಿಕ ಸಂಕಷ್ಟ ದಲ್ಲಿದ್ದರೆ ರೈತರಿಗೆ ಪರಿಹಾರವನ್ನೆ ಕೊಡಕ್ಕೆ ಆಗಲ್ಲ ಎಂದು ಹೇಳಬೇಕಾಗಿತ್ತು ಎಂದರು.
ಹಸಿವಿನಿಂದ ಬೇರೆ ಯಾರು ಸಾಯಬಾರದು ಎಂದು ಬೆಳೆದ ಬೆಳೆಗೆ ಬೆಲೆ ದೊರೆಯದಿದ್ದರೂ ಮಾರುಕಟ್ಟೆಗೆ ಹಾಕುತ್ತಾರೆ. ನಾವು ಹೇಗೋ ಬದುಕುತ್ತೀವಿ, ಸದ್ಯ ಘೋಷಣೆ ಮಾಡಿರುವ ಪರಿಹಾರದ ಹಣವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಇದು ದುರಹಂಕಾರ ಅಲ್ಲ. ಇದನ್ನು ಹೇಗೆ ನಿಮಗೆ ಯಾವ ರೀತಿ ಅರ್ಥೈಸಬೇಕು ಎನ್ನುವುದೇ ಗೊತ್ತಾಗ್ತಿಲ್ಲ. ಈಗ ಹೆಕ್ಟೇರ್‍ಗೆ 10 ಸಾವಿರ ಘೋಷಣೆ ಮಾಡಿರುವುದು ಏನೇನಕ್ಕೂ ಸಾಕಾಗುವುದಿಲ್ಲ. ಒಂದು ಎಕರೆ ಟಮೋಟೊ ಬೆಳೆ ಬೆಳೆಯಲು ಕನಿಷ್ಠ 2 ಲಕ್ಷ ರೂ ವೆಚ್ಚ ತಗುಲುತ್ತದೆ. ಮಾವು ಒಂದು ವರ್ಷದ ನಿರ್ವಹಣೆ 40 ಸಾವಿರದಿಂದ 50 ಸಾವಿರ ಖರ್ಚು ಆಗುತ್ತದೆ. ವೈಜ್ಞಾನಿಕ ಆಲೋಚನೆ ಮಾಡಿ ಪರಿಹಾರ ಘೋಷಣೆ ಮಾಡಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲವೇ. ಕನಿಷ್ಟ 75 ಸಾವಿರ ಪರಿಹಾರ ನೀಡಿದರೆ ರೈತರ ಉಸಿರು ನಿಲ್ಲುತ್ತದೆ ಎಂದರು.
ನಾನು ರೈತ ಆಗಿರುವುದರಿಂದ ನೋವು ಅರ್ಥ ಆಗಿದೆ. ನಿಮ್ಮ ಇಡೀ ಸಚಿವ ಸಂಪುಟದಲ್ಲಿ ಒಬ್ಬ ರೈತ ಯಾರಾದರೂ ಇದಿದ್ದರೆ ಈ ನೋವು ಅನುಭವಿಸಿದ್ದರೆ ಗೊತ್ತಿರುತ್ತದೆ ಎಂದು ಆಕ್ರೊಶಭರಿತರಾದರು.
ಜನ, ರೈತರು ಅಂದರೆ ಸರ್ಕಾರಕ್ಕೆ ದುರಅಹಂಕಾರ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವೇ ನಮ್ಮನ್ನು ಅಸಹಾಯಕರಾನ್ನಾಗಿ ಮಾಡಿದೆ. ಬೀದಿಗೆ ಇಳಿದು ಪ್ರತಿಭಟಿಸುವಂತಿಲ್ಲ. ಭಗವಂತ ನಮಗೆ ಯಾಕೆ ಹೀಗೆ ಇಟ್ಟೀದ್ದೀಯಾ ಎಲ್ಲಾ ಉತ್ಸಾಹ ಕಳೆದುಕೊಂಡಿದ್ದೇವೆ. ಆದರೆ ಜವಾಬ್ದಾರಿ ಮರೆತು ದೂರ ಓಡಿ ಹೋಗೋಲ್ಲ. ನನ್ನ ಪ್ರಯತ್ನ ಮಾಡುತ್ತೇನೆ, ಮಾಡುತ್ತಲೇ ಇರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜಿಪಂ ಮಾಜಿ ಅಧ್ಯಕ್ಷ ಕೌನ್ಸಿಲರ್ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ತಹಸೀಲ್ದಾರ್ ಶ್ರೀನಿವಾಸ್, ತಾಲ್ಲೂಕು ವೈದ್ಯಾಧಿಕಾರಿ ವಿಜಯಮ್ಮ, ಪಿ.ಎಸ್.ಐ. ರವಿಕುಮಾರ್, ಇ.ಓ. ಆನಂದ್ ವೃತ್ತ ನಿರೀಕ್ಷಕ ರವಿಕುಮಾರ್, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು
.