

ಕೋಲಾರ,ಅ.31: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಎಲೆಮರೆಯ ಕಾಯಂತೆ ಕನ್ನಡ ತಾಯಿಯ ಸೇವೆಯಲ್ಲಿ ತೊಡಗಿರುವ ರಮೇಶ್ ಮತ್ತು ಸುರೇಶ್ ನಮಗೆ ಮಾದರಿ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯೋತ್ಸವ ಸಲುವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡದ ಸೇವೆಯಲ್ಲಿ ತೊಡಗಿರುವ ಕನ್ನಡ ತಾಯಿಯ ಪರಿಚಾರಕರನ್ನು ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗ ಪರಿಚಾರಕರು ಎಂಬ ಮನಸ್ಥಿತಿ ಹೋಗಿದೆ. ಮೌಲ್ಯ ಕಳೆದುಕೊಂಡಿದೆ. ಕನ್ನಡದ ಸೇವೆಯೇ ಪರಿಚಾರಕತ್ವ. ಆ ಮನೋಭಾವ ಎಲ್ಲರಲ್ಲೂ ಬರಬೇಕು. ಸುರೇಶ್ ಹಾಗೂ ರಮೇಶ್ ನಿಜವಾದ ಕನ್ನಡ ಪರಿಚಾರಕರು. ಪ್ರತಿಯೊಬ್ಬರಿಗೂ ಅವರು ಮಾದರಿ. ನಿಜವಾದ ಕನ್ನಡ ಸೇವೆ ಅವರಿಂದ ಆಗುತ್ತದೆ. ಇಂಥವರು ನೂರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಎಲೆಮರೆಯ ಕಾಯಂತೆ ಕೆಲಸ ಮಾಡುತ್ತಿರುವವರನ್ನು ಗುರುತಿಸುವುದು ಪತ್ರಕರ್ತರ ಜವಾಬ್ದಾರಿ ಎಂದು ಹೇಳಿದರು.
ಎಲ್ಲಾ ಕ್ಷೇತ್ರಗಳಲ್ಲಿ ಮೌಲ್ಯಗಳ ಅಧಃಪತನವಾಗಿವೆ. ಇಂತಹ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ನೋವು ಮರೆತು ಸುರೇಶ್ ಹಾಗೂ ರಮೇಶ್ ಕೆಲಸಮಾಡುತ್ತಿದ್ದಾರೆ. ಇದೊಂದು ಸಾರ್ಥಕ ಕೆಲಸ ಎಂದು ತಿಳಿಸಿದರು.
ಗೋಕಾಕ್ ಚಳವಳಿ ಬಳಿಕ ಕೆಜಿಎಫ್ ಪರಿಸ್ಥಿತಿ ಬದಲಾಯಿತು. ಕೊಚ್ಚೆ ನೀರು ಕುಡಿದರೂ ಕಾವೇರಿ ಹೋರಾಟಕ್ಕೆ ಸ್ಪಂದಿಸುತ್ತೇವೆ. ಕನ್ನಡ ಎಂಬ ವಿಶಾಲಪ್ರಜ್ಞೆ ಈಗ ಮರೆಯಾಗುತ್ತಿದೆ. ಒಂದು ದಿನ ಕನ್ನಡ ಸೇವೆಯಲ್ಲಿ ತೊಡಗಿದರೆ ಪ್ರಯೋಜನ ಇಲ್ಲ. ಸುರೇಶ್, ರಮೇಶ್ ಅವರಂತೆ ಸದಾ ತುಡಿಯಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್, ಯಾವುದೇ ಕಾರ್ಯಕ್ರಮ ಇದ್ದರೂ ಸುರೇಶ್ ಹಾಗೂ ರಮೇಶ್ ಪಾಲ್ಗೊಳ್ಳುತ್ತಾರೆ. ಕನ್ನಡ ಕಾಯಕದಲ್ಲಿ ತೊಡಗಿದ್ದಾರೆ. ಕನ್ನಡ ಬಾವುಟ ಹಿಡಿದು ಕನ್ನಡಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಮಾಮಿ ಪ್ರಕಾಶ್ ಮಾತನಾಡಿ, ಮೊದಲ ಬಾರಿ ಎತ್ತಿನ ಗಾಡಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಾವಿರಾರು ಜನ ಕೆಲಸ ಮಾಡಿದ್ದಾರೆ. ಬಳಿಕ ಭುವನೇಶ್ವರಿ ಕನ್ನಡ ಸಂಘದಿಂದ ಆಚರಣೆ ಮಾಡಿದವು. 80ರ ದಶಕದಲ್ಲಿ 80ಕ್ಕೂ ಅಧಿಕ ಪಲ್ಲಕ್ಕಿಗಳು ಪಾಲ್ಗೊಳ್ಳುತ್ತಿದ್ದವು. ಎರಡನೇ ದಸರಾ ಎಂಬಷ್ಟು ಖ್ಯಾತಿ ಪಡೆಯಿತು. ಬಳಿಕ ಜಾತಿವಾರು ಸಂಘಟನೆಗಳಾಯಿತು. ಇದು ವಿಷಾದನೀಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಗೋಪಾಲಗೌಡ ಮಾತನಾಡಿ, ಕನ್ನಡ ಹೋರಾಟದಲ್ಲಿ ಹಲವಾರು ಅಜ್ಞಾತ ಹೋರಾಟಗಾರರು ಪಾಲ್ಗೊಂಡಿದ್ದಾರೆ. ಸುರೇಶ್ ಹಾಗೂ ರಮೇಶ್ ಪ್ರಚಾರ ಬಯಸದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯೋತ್ಸವ ನಾಡಹಬ್ಬ. ಅತೀವ ಹೆಮ್ಮೆ ಪಡುವ ಸಂದರ್ಭ. ಅನೇಕ ಚೇತನಗಳು ಕನ್ನಡಕ್ಕೆ ಜೀವ ಸವೆಸಿವೆ. ಏಕೀಕರದಲ್ಲಿ ಕುವೆಂಪು ಕೂಡ ಪಾಲ್ಗೊಂಡಿದ್ದರು. ಆಗ ಅವರು ಸರ್ಕಾರದ ಸೇವೆಯಲ್ಲಿದ್ದ ಕಾರಣ ಏಕೆ ಬಂಧಿಸಬಾರದು ಎಂದು ಕೇಳಿತ್ತು. ಕನ್ನಡ ಸಂಸ್ಕೃತಿ ಶಾಶ್ವತ, ಸರ್ಕಾರಗಳು ಬಂದು ಹೋಗುತ್ತವೆ ಎಂದು ಕವನದ ಮೂಲಕವೇ ತಿರುಗೇಟು ನೀಡಿದ್ದರು’ ಎಂದರು.
ಹಿಂದೆ ಕಾವೇರಿ ಹೋರಾಟದಲ್ಲಿ ಉತ್ತರ ಕರ್ನಾಟಕದವರು ಪಾಲ್ಗೊಳ್ಳುತ್ತಿರಲಿಲ್ಲ. ಈಚೆಗೆ ಕಾವೇರಿ ನದಿ ನೀರಿನ ಸಮಸ್ಯೆ ಉದ್ಭವಿಸಿದಾಗ ಎಲ್ಲರೂ ಸ್ಪಂದಿಸಿದರು ಎಂದು ಹೇಳಿದರು.
ನಾವೆಲ್ಲಾ ಸದಾ ಜಾಗೃತರಾಗಿರಬೇಕು. ಕೋಲಾರ ಗಡಿ ಭಾಗದಲ್ಲಿ ತೆಲುಗು, ತಮಿಳು ಪ್ರಭಾವವಿದೆ. ಇಲ್ಲೂ ಕನ್ನಡ ಹೋರಾಟಗಾರರು ಇದ್ದಾರೆ. ಈ ಹೋರಾಟ ಮುಂದುವರಿಯಲಿ’ ಎಂದರು.
ಕನ್ನಡ ಹೋರಾಟಗಾರ ಕೋ.ನಾ ಪ್ರಭಾಕರ್ ಮಾತನಾಡಿ, ಕೋಲಾರ ಚಳವಳಿಗಳ ತವರು. ಮೊದಲ ಹೋರಾಟ ಆರಂಭವಾಗಿದ್ದೇ ಕೋಲಾರದಲ್ಲಿ. ಅನೇಕ ಹೋರಾಟಗಳು ನಡೆದಿವೆ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವ ಹೊಳ್ಳ, ಸಾಮಾನ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ ಸುರೇಶ್, ರಮೇಶ್ ಇಬ್ಬರೂ ಅಮಾಯಕರು. ಕನ್ನಡ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುತ್ತಿರುತ್ತಾರೆ. ಹಿಂದೆ ರಾಜ್ಯೋತ್ಸವ ಎಂದರೆ ಹಬ್ಬದ ವಾತಾವರಣ ಇರುತಿತ್ತು. ಈಗ ಆ ರೀತಿ ಇಲ್ಲ. ಕಾಟಾಚಾರಕ್ಕೆ ನಡೆಯುತ್ತಿದೆ ಎಂದರು.
ಚಿತ್ರಮಂದಿರಗಳಲ್ಲಿ ನವೆಂಬರ್ ಗಳಲ್ಲಿ ಕನ್ನಡಚಿತ್ರ ಪ್ರದರ್ಶಿಸುತ್ತಿದ್ದರು. ಈಗ ಆ ರೀತಿ ಇಲ್ಲ. ಈ ತಿಂಗಳಲ್ಲಾದರೂ ಕನ್ನಡ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಪರಿಚಾರಕರಾದ ಸುರೇಶ್(ಸೂರಿ) ಹಾಗೂ ರಮೇಶ್ ಅವರನ್ನು ಸನ್ಮಾನಿಸಲಾಯಿತು.
ರಾಮಮೂರ್ತಿ ಪ್ರಾರ್ಥಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಪಾ.ಶ್ರೀ.ಅನಂತರಾಮ್, ಬಿ.ಸುರೇಶ್, ಎಸ್.ಸಚ್ಚಿದಾನಂದ, ಕೆ.ಬಿ.ಜಗದೀಶ್, ಎನ್.ಮುನಿವೆಂಕಟೇಗೌಡ, ಓಂಕಾರಮೂರ್ತಿ, ನಾ,ಮಂಜುನಾಥ್, ಅಬ್ಬಣಿಶಂಕರ್, ಸರ್ವಜ್ಞಮೂರ್ತಿ, ಸ್ಕಂದಕುಮಾರ್, ಆಸಿಫ್, ನವೀದ್ಪಾಷ, ಕಿರಣ್, ಎಸ್.ಸೋಮಶೇಖರ್, ಗೋಪಿ, ವಿ.ಪದ್ಮನಾಭ, ಜೆ.ರಂಗನಾಥ್, ಕೇದಾರ ಆರಾಧ್ಯ, ಪುರುಷೋತ್ತಮ, ಬಾಬಾ, ವಿಜ್ಞಾನ ಲೇಖಕ ಪುರುಷೋತ್ತಮರಾವ್, ಮುಖಂಡರಾದ ಆ.ಕೃ.ಸೋಮಶೇಖರ್, ಧನರಾಜ್, ನಳಿನಿಗೌಡ, ಚಂಬೆರಾಜೇಶ್, ಪಿ.ನಾರಾಯಣಪ್ಪ, ಗಂಗಾಧರ್, ಶ್ರೀಹರಿ, ಅಮರ್, ವಿಜಿಕುಮಾರ್, ಪವನ್, ಶ್ರೀಕಾಂತ್, ನಾಗೇಶ್, ಮಂಜು ಇನ್ನಿತರರು ಉಪಸ್ಥಿತರಿದ್ದರು.