ಶ್ರೀನಿವಾಸಪುರ: ರಾಮಾಯಣ ಜಗತ್ತಿಗೆ ದಾರಿದೀಪವಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಮಾಯಾ ಬಾಲಚಂದ್ರ ಹೇಳಿದರು.
ಪಟ್ಟಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಾಲ್ಮೀಕಿ ಕಾವ್ಯ ಒಂದು ಚಿಂತನೆ ಎಂಬ ಸಾಹಿತ್ಯ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ರಾಮಾಯಣ ಹಲವು ಆಯಾಮ ಒಳಗೊಂಡ ಕಾವ್ಯ. ಅಲ್ಲಿ ಬರುವ ಮಹಾ ಪಾತ್ರಗಳು ಹಾಗೂ ಕತೆ, ಉಪ ಕತೆಗಳು ಎಲ್ಲ ವಯೋಮಾನದ ಜನರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ ಎಂದು ಹೇಳಿದರು.
ಉಪನ್ಯಾಸಕಿ ಕಮಲಾ ಹೆಗಡೆ ಮಾತನಾಡಿ, ವಾಲ್ಮೀಕಿ ಮಹರ್ಷಿಯ ಮನದಲ್ಲಿ ಅರಳಿದ ಹಾಗೂ ಭಾರತೀಯ ಕಾವ್ಯ ಪರಂಪರೆಯ ಮಿನುಗಿನಂತಿರುವ ರಾಮಾಯಣ, ಸರ್ವಕಾಲಿಕ ಆದರ್ಶ ಸಾರುತ್ತದೆ. ರಾಮನ ಆದರ್ಶ ವ್ಯಕ್ತಿತ್ವ ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ.ಪೋಷಕರು ಮಕ್ಕಳಲ್ಲಿ ರಾಮಾಯಣ, ಮಹಾಭಾರತದಂಥ ಕಾವ್ಯಗಳ ಬಗ್ಗೆ ಆಸಕ್ತಿ ಉಂಟುಮಾಡಬೇಕು ಎಂದು ಹೇಳಿದರು.
ಶಿಕ್ಷಕ ಎಂ.ಅರುಣ್ ಕುಮಾರ್, ಶಿಕ್ಷಕಿಯರಾದ ಲಕ್ಷ್ಮೀಗೌಡ, ಆರತಿ, ಮಮತಾ ರಾಣಿ, ಜಯಲಕ್ಷ್ಮಿ, ಚಿಕ್ಕರೆಡ್ಡಮ್ಮ ಸಂವಾದದಲ್ಲಿ ಭಾಗವಹಿಸಿದ್ದರು.