ರಾಮ ರಾಜ್ಯದ ಕಲ್ಪನೆ ಸಾಕಾರಗೊಂಡಾಗ ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳುತ್ತದೆ ; ಟಿ.ಎಸ್.ಮಾಯಾ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರಾಮ ರಾಜ್ಯದ ಕಲ್ಪನೆ ಸಾಕಾರಗೊಂಡಾಗ ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳುತ್ತದೆ ಎಂದು ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಟಿ.ಎಸ್.ಮಾಯಾ ಬಾಲಚಂದ್ರ ಹೇಳಿದರು.
ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಗುರುವಾರ ಶ್ರೀರಾಮ ನವಮಿ ಪ್ರಯುಕ್ತ ಏರ್ಪಡಿಸಲಾಗಿದ್ದ, ರಾಮನ ಕುರಿತ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಷ್ಟರಿಗೆ, ಸಜ್ಜನರಿಗೆ ಮನೋಬಲ ನೀಡುವಲ್ಲಿ, ದುರ್ಮಾರ್ಗಿಗಳ ಮನಃಪರಿವರ್ತನೆಯಲ್ಲಿ, ಎಲ್ಲರಿಗೂ ಸನ್ಮಾರ್ಗ ತೋರುವಲ್ಲಿ ಶ್ರೀರಾಮನ ವ್ಯಕ್ತಿತ್ವ ಅತ್ಯಂತ ಪ್ರಸ್ತುತ. ಇಂತಹ ಅನನ್ಯ ಸಂದೇಶವನ್ನು ಭಕ್ತಿಪಂಥದ ಮೂಲಕ, ದಾಸ ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದ ಸಂತರನ್ನು ಸ್ಮರಿಸಬೇಕು. ರಾಮನ ಆದರ್ಶಗಳನ್ನು ಅರ್ಥೈಸಿಕೊಳ್ಳಲು ದಾಸಸಾಹಿತ್ಯ ಸಹಕಾರಿ ಎಂದು ಹೇಳಿದರು.
ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಎಂ.ವೇಮಣ್ಣ ಮಾತನಾಡಿ, ರಾಮ ನವಮಿ ರಾಮನ ಆದರ್ಶ ಪಾಲನೆಗೆ ಚಾಲನೆ ನೀಡುವ ಕಾಲ. ಪ್ರತಿಯೊಬ್ಬರೂ ರಾಮ ಚರಿತೆಯನ್ನು ಓದಬೇಕು. ಅರ್ಥ ಮಾಡಿಕೊಂಡು ಅನುಸರಿಸಬೇಕು. ಆಧ್ಯಾತ್ಮ ಬಹುದೊಡ್ಡ ಶಕ್ತಿ. ಪುರಾಣ ಪುರುಷರ ಜೀವನ ದರ್ಶನದಿಂದ ಮನೋಬಲ ಹೆಚ್ಚುತ್ತದೆ ಎಂದು ಹೇಳಿದರು.
ಚಿಂತಕ ಎ.ವೆಂಕಟರೆಡ್ಡಿ ಅಯೋಧ್ಯಾ ಕಾಂಡ, ಸುಂದರ ಕಾಂಡದ ಬಗ್ಗೆ ಉಪನ್ಯಾಸ ನೀಡಿದರು. ಟಿ.ಎಸ್.ಮಾಯಾ ಬಾಲಚಂದ್ರ ರಾಮನ ಆದರ್ಶ ಕುರಿತು ಮಾತನಾಡಿದರು.
ತಾಲ್ಲೂಕು ವಿಶ್ವಹಿಂದೂ ಪರಿಷತ್ತಿನ ಮುಖಂಡರಾದ ಕೆ.ದಿವಾಕರ್, ಮೋಹನ್, ಗೋವಿಂದಯ್ಯ, ಜಯರಾಮರೆಡ್ಡಿ, ಡಾ. ರಮಾನಂದ್, ಮಂಜುಳಮ್ಮ, ಸತೀಶ್‍ರೆಡ್ಡಿ ಇದ್ದರು
,