ಕೃಷಿ ಕ್ಷೇತ್ರ ಪ್ರಮುಖ ಉದ್ಯಮವೆಂದು ಘೋಷಣೆ ಮಾಡುವ ಜೊತೆಗೆ ದೆಹಲಿ ಚಲೋ ಹೊರಟಿರುವ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ವಿಶೇಷ ಸಂಸತ್ ಅಧಿವೇಶನ ಕರೆಯಬೇಕು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಕೃಷಿ ಕ್ಷೇತ್ರವನ್ನು ಪ್ರಮುಖ ಉದ್ಯಮವೆಂದು ಘೋಷಣೆ ಮಾಡುವ ಜೊತೆಗೆ ದೆಹಲಿ ಚಲೋ ಹೊರಟಿರುವ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ವಿಶೇಷ ಸಂಸತ್ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿ ರೈತಸಂಘದಿಂದ ಹೊಸ ವರ್ಷದ ಪ್ರಯುಕ್ತ ತಾಲೂಕು ಕಚೇರಿಯ ಅಧಿಕಾರಿಗಳಿಗೆ ತರಕಾರಿ ವಿತರಿಸಿ, ಶಿರಸ್ತೇದಾರ್ ಕೊಂಡಪ್ಪ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ತರಕಾರಿ ವಿತರಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜನಾಭಿಪ್ರಾಯವಿಲ್ಲದೆ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವುದರಿಂದಾಗಿ ದಿನೇದಿನೇ ಕೃಷಿ ಕ್ಷೇತ್ರದಿಂದ ರೈತರು ವಿಮುಕ್ತಿ ಹೊಂದುತ್ತಿದ್ದು, ಕೃಷಿ ಕ್ಷೇತ್ರವು ಕಾರ್ಪೋರೇಟ್ ಕಂಪನಿಗಳ ಪಾಲಾಗುತ್ತಿದೆ.
ಇದೇ ರೀತಿ ಮುಂದುವರೆದರೆ ಕೃಷಿಯು ಸಂಪೂರ್ಣವಾಗಿ ಮಾಯವಾಗಿ ತುತ್ತು ಅನ್ನಕ್ಕಾಗಿ ಹೊರದೇಶಗಳ ಬಳಿ ಕೈಚಾಚಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅಸಮಧಾನ ವ್ಯಕ್ತಪಡಿಸಿ, ಈ ಕೂಡಲೇ ಕೃಷಿ ಕ್ಷೇತ್ರವನ್ನು ಪ್ರಮುಖ ಉದ್ಯಮವೆಂದು ಘೋಷಿಸಬೇಕು, ದೆಹಲಿ ಚಲೋ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಚರ್ಚಿಸಲು ವಿಶೇಷ ಸಂಸತ್ ಅಧಿವೇಶನ ನಡೆಸಬೇಕೆಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಜಿಲ್ಲೆಯಾದ್ಯಂತ ಒತ್ತುವರಿಯಾಗಿರುವ ಸರ್ಕಾರಿ ಸ್ವತ್ತುಗಳನ್ನು ಉಳಿಸಲು ವಿಶೇಷ ತಂಡ ರಚನೆ ಮಾಡಬೇಕು. ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ರೈತರಿಗೆ ಅಗತ್ಯವಿರುವ ಔಷಧಿ, ಬಿತ್ತನೆ ಬೀಜ ಸೇರಿದಂತೆ ಎಲ್ಲವನ್ನೂ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕೋಲಾರ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲಿಯೇ ಖ್ಯಾತಿಯಾಗಿದ್ದರೂ ಇಂದು ಅವಕ ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚಾಗಿವೆ. ಮಾರುಕಟ್ಟೆಗೆ ಅವಶ್ಯವಿರುವ ಜಾಗವನ್ನು ನೀಡಲು ಇದುವರೆಗೂ ಸಾಧ್ಯವಾಗದಿರುವುದು ಖಂಡನೀಯವಾಗಿದ್ದು, ಕೂಡಲೇ ಜಾಗದ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶೀರಸ್ತೇದಾರ್ ಕೊಂಡಪ್ಪ, ತಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಪ್ರಧಾನ ಕಾರ್ಯದರ್ಶಿ ಐತಾಂಡಹಳ್ಳಿ ಮುನ್ನಾ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಹಸಿರುಸೇನೆ ತಾಲೂಕು ಅಧ್ಯಕ್ಷ ಚಾಂದ್‍ಪಾಷ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ನಾರಾಯಣಪ್ಪ, ಕುವ್ವಪ್ಪ, ಯುವ ಮುಖಂಡ ಕಿರಣ್, ಮಹಮದ್ ಶೋಹೀಬ್, ವಜೀದ್ ಖಾನ್, ಸನಾವುಲ್ಲಾ, ಮಹಮದ್ ಉದ್ದೀನ್, ಶೇಖ್ ಬಾಬಾಜಾನ್ ಉಪಸ್ಥಿತರಿದ್ದರು
.