ಜಿಲ್ಲಾದ್ಯಂತ ಸರ್ಕಾರಿ ಕೆರೆ, ರಾಜಕಾಲುವೆ, ಗುಂಡು ತೋಪು, ಗೋಮಾಳ ಒತ್ತುವರಿ ಮಾಡಿರುವ ಶಾಸಕರ ಸದಸ್ಯತ್ವ ರದ್ದು ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಲು ಚುನಾವಣಾಧಿಕಾರಿಗಳಿಗೆ ರೈತ ಸಂಘ ಒತ್ತಾಯ

ಬಂಗಾರಪೇಟೆ; ಮಾ.26: ಜಿಲ್ಲಾದ್ಯಂತ ಸರ್ಕಾರಿ ಕೆರೆ, ರಾಜಕಾಲುವೆ, ಗುಂಡು ತೋಪು, ಗೋಮಾಳವನ್ನು ಒತ್ತುವರಿ ಮಾಡಿಕೊಂಡಿರುವ ಶಾಸಕರ ಸದಸ್ಯತ್ವವನ್ನು ರದ್ದು ಮಾಡುವ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿ ಮಾ.29ರಂದು ಜಿಲ್ಲಾಧಿಕಾರಿಗಳ ಕಚೇರಿಯೆದುರು ಹೋರಾಟ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ರೈಲ್ವೇ ನಿಲ್ದಾಣದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ಮಾಲೂರು ಶಾಸಕರಾದ ಕೆ.ವೈ.ನಂಜೇಗೌಡರು ಅಕ್ರಮ ಗಣಿಗಾರಿಕೆಗೆ ಗೋಮಾಳ ಜಮೀನು ಕಬಳಿಕೆ, ಶ್ರೀನಿವಾಸಪುರ ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ಅವರು ನೂರಾರು ಎಕರೆಗೂ ಹೆಚ್ಚು ಅರಣ್ಯ ಭೂಮಿ ಕಬಳಿಕೆ ಜೊತೆಗೆ ಸ್ಥಳೀಯ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಗುಂಡುತೋಪು, ಗೋಮಾಳ, ಕೆರೆ, ಜಮೀನನ್ನು ಒತ್ತುವರಿ ಮಾಡಿಕೊಂಡು ಲೇಔಟ್, ಗಾಲ್ಫ್ ಅಭಿವೃದ್ಧಿಪಡಿಸಿದ್ದಾರೆ.
ಈ ಬಗ್ಗೆ ಸತತವಾಗಿ 10 ವರ್ಷಗಳಿಂದ ಹೋರಾಟದ ಜೊತೆಗೆ ಅಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಆದೇಶದಂತೆ ಒತ್ತುವರಿ ತೆರವುಗೊಳಿಸಲು ಮಾನ್ಯ ನ್ಯಾಯಾಲಯ ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚನೆ ಮಾಡಿರುವುದರಿಂದ ಭೂ ಕಬಳಿಕೆ ಆರೋಪ ಇವರ ಮೇಲಿರುವುದರಿಂದ ಇವರ ಶಾಸಕ ಸದಸ್ಯತ್ವ ರದ್ದು ಮಾಡುವ ಜೊತೆಗೆ ಭೂ ಆರೋಪ ಮುಕ್ತ ಆಗುವವರೆಗೂ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನಾತ್ಮಕವಾಗಿ ತಡೆ ಹಿಡಿಯಬೇಕೆಂದು ಚುನಾವಣಾಧಿಕಾರಿಗಳನ್ನು ಸಭೆಯಲ್ಲಿ ಒತ್ತಾಯಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಂದ ಆಯ್ಕೆಯಾದ ಶಾಸಕರು ಸಂವಿಧಾನದಡಿಯಲ್ಲಿ ಕೆಲಸ ನಿರ್ವಹಿಸುವಾಗ ಪ್ರಾಮಾಣಿಕವಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಆದರೆ, ಎಲ್ಲಾ ಸಂವಿಧಾನದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅಧಿಕಾರ ಬರುವುದೇ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲು ಎಂಬಂತೆ ಬಿಂಬನೆ ಮಾಡುವುದು ಯಾವ ನ್ಯಾಯ ?. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಆರೋಪವಿಲ್ಲ. ಆದರೆ, ಸರ್ಕಾರಿ ಆಸ್ತಿಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇಔಟ್ ಗಾಲ್ಫ್ ಕೋಳಿ ಫಾರಂಗಳನ್ನು ನಿರ್ಮಿಸಿರುವುದು ಶಾಸಕರ ಭೂ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಆರೋಪ ಮಾಡಿದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಅಕ್ರಮ ಗಣಿಗಾರಿಕೆಗೆ ನಕಲಿ ದಾಖಲೆಯನ್ನು ಸೃಷ್ಠಿ ಮಾಡಿ ಟೇಕಲ್ ವ್ಯಾಪ್ತಿಯಲ್ಲಿ ಗೋಮಾಳ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿರುವ ಜೊತೆಗೆ ಪ್ರಭಾವಿ ರಾಜಕಾರಣಿ ಕೆ.ಆರ್.ರಮೇಶ್ ಕುಮಾರ್ ತನ್ನ ಹುಟ್ಟೂರಿನಲ್ಲಿ ನೂರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿರುವ ಜೊತೆಗೆ ಕೋಲಾರ ಶಾಸಕರಾದ ಕೆ.ಶ್ರೀನಿವಾಸಗೌಡ ಅವರು ಅಣ್ಣಿಹಳ್ಳಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಮಾವಿನ ತೋಪು ಅಭಿವೃದ್ಧಿ ಮಾಡಿಸಿಕೊಂಡಿದ್ದಾರೆ. ಜೊತೆಗೆ ಮುಳಬಾಗಿಲು ಶಾಸಕ ಎಚ್.ನಾಗೇಶ್ ಅವರು ಹೆಜ್ಜೆಹೆಜ್ಜೆಗೂ ಲಂಚ ಲಂಚ ಎಂದು ಅಧಿಕಾರಿಗಳು, ಗುತ್ತಿಗೆದಾರರನ್ನು ಪೀಡಿಸುವುದಕ್ಕೆ ಇತ್ತೀಚೆಗೆ ಮಾಧ್ಯಮದಲ್ಲಿ ಪ್ರಕಟವಾದ ಹಣದ ವ್ಯವಹಾರವೇ ಭ್ರಷ್ಟಾಚಾರತೆಗೆ ಕೈಗನ್ನಡಿಯಾಗಿದೆ ಹಾಗಾಗಿ ಇವರ ಶಾಸಕ ಸ್ಥಾನದ ಸದಸ್ಯತ್ವವನ್ನು ಯಾಕೆ ರದ್ದು ಮಾಡಬಾರದೆಂದು ಜಿಲ್ಲಾಡಳಿತವನ್ನು ಪ್ರಶ್ನೆ ಮಾಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ರಾಜಕಾರಣಿಗಳಿಗೆ ನೈತಿಕತೆ ಎಂಬುದು ಇಲ್ಲದಂತಾಗಿದೆ. ಸಂವಿಧಾನದ ಅಡಿಯಲ್ಲಿ ಆಯ್ಕೆಯಾದ ಅವರು ಸಾರ್ವಜನಿಕವಾಗಿ ಯಾವ ರೀತಿ ಮಾತನಾಡಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡಬೇಕಾದ ಪರಿಸ್ಥಿತಿ ಇದೆ. ಯಾವ ಭಾಷೆ ಮಾತನಾಡಬೇಕು ಎಂಬುದನ್ನು ಅರಿಯದೆ ತಮಗಿಷ್ಟ ಬಂದ ರೀತಿ ಏಕವಚನ ಬಳಸಿದರೆ ಯಾವ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿಯವರ ಅನರ್ಹತೆ ಶಿಕ್ಷೆ ದೇಶದ ರಾಜಕಾರಣಿಗಳಿಗೆ ಪಾಠವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾದ್ಯಂತ 6 ಶಾಸಕರ ಜೊತೆಗೆ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಒಂದಲ್ಲಾ ಒಂದು ಭೂ ಹಗರಣ, ಲಂಚದ ಆರೋಪದಲ್ಲಿ ಸಿಲುಕಿರುವುದರಿಂದ ಜಿಲ್ಲೆಯ ಅಭಿವೃದ್ಧಿ ಹಾಗೂ ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಭೂ ಹಗರಣದಲ್ಲಿ ಸಿಲುಕಿರುವ ಶಾಸಕರ ಸದಸ್ಯತ್ವ ರದ್ದು ಮಾಡಿ ಭ್ರಷ್ಟಾಚಾರದಲ್ಲಿ ಸಿಲುಕಿರುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂದು ಮಾನ್ಯ ಒತ್ತಾಯಿಸಿ ಮಾ.29ರ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡುವ ಮೂಲಕ ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರಮಿಸುವುದಾಗಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಚಾಂದ್‍ಪಾಷ, ಕದಿರಿನತ್ತ ಅಪ್ಪೋಜಿರಾವ್, ಮಾಸ್ತಿ ಹರೀಶ್, ವೆಂಕಟೇಶ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಕಿರಣ್, ಗಿರೀಶ್, ಐತಾಂಡಹಳ್ಳಿ ಮುನ್ನಾ ಮುಂತಾದವರಿದ್ದರು.