ಶ್ರೀನಿವಾಸಪುರ, ಸ.17, ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳು ಹಾಗೂ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡುವಂತೆ ರೈತ ಸಂಘದಿಂದ ಅಬಕಾರಿ ಇಲಾಖೆ ಮುಂದೆ ಹೋರಾಟ ಮಾಡಿ ಅಬಕಾರಿ ನಿರೀಕ್ಷಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ವಿಧಾನ ಸಭಾಧ್ಯಕ್ಷ ಜನ ಪ್ರಿಯ ಶಾಸಕರಾದಂತಹ ಕೆ.ಆರ್.ರಮೇಶ್‍ಕುಮಾರ್ ರವರ ತವರು ಜಿಲ್ಲೆಯಲ್ಲೇ ಗ್ರಾಮೀಣ ಪ್ರದೇಶಗಳ ಅಕ್ರಮ ಮದ್ಯ ಮಾರಾಟ ದಂದೆ ರಾಜಾರೋಷವಾಗಿ ನಡೆಯುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿರುವುದಕ್ಕೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಶಾಸಕರ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಕುಡಿಯುವವನು ಕೇವಲ ಮದ್ಯವನ್ನು ಕುಡಿಯವುದಿಲ್ಲ. ತಾಯಿಯ ಸುಖ ಹೆಂಡತಿಯ ನೆಮ್ಮದಿ ಮಕ್ಕಳ ಕನಸುಗಳು, ತಂದೆಯ ಪ್ರತಿಷ್ಠೆ ಎಲ್ಲವನ್ನು ಒಂದೇ ಗುಟಕಿನಲ್ಲಿ ಕುಡಿದು ಇಡೀ ಸಂಸಾರದ ಮಾನ ಸಾರ್ವಜನಿಕವಾಗಿ ಹರಾಜು ಹಾಕಿ ಕುಟುಂಬಗಳೇ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ಇದ್ದರೂ ಈ ದುರಂತಗಳಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರವೇ ಅವ್ಯವಸ್ಥೆಗೆ ಕಾರಣವೆಂದು ಕಿಡಿಕಾರಿದರು.
ಸಾಂಕ್ರಾಮಿಕ ರೋಗಗಳು ಅತಿವೃಷ್ಟಿಯಿಂದ ತತ್ತರಿಸಿ ದುಡಿಯುವ ಕೈಗೆ ಕೆಲಸ ವಿಲ್ಲದೆ ಬೆಳೆದ ಬೆಳೆಗೆ ಬೆಲೆ ಇಲ್ಲದೆ ತತ್ತರಿಸಿರುವ ಜನ ಸಾಮಾನ್ಯರು ಬುದುಕು ಕಟ್ಟಿಕೊಳ್ಳುತ್ತಿರುವ ಸಮಯದಲ್ಲಿ ಗ್ರಾಮೀಣ ಪ್ರದೇಶಗಳ ಅಕ್ರಮ ಮದ್ಯ ಮಾರಾಟ ಬಡವರ ಅನ್ನವನ್ನು ಕಸಿದುಕೊಳ್ಳುತ್ತಿದೆ. ಕೂಲಿ ಮಾಡಿ ಮನೆಯ ಸಂಸಾರ ನಿರ್ವಹಣೆ ಮಾಡಬೇಕಾದ ಮದ್ಯೆ ಪ್ರಿಯರು ದುಡಿದ ಹಣವನ್ನು ಸಂಜೆ ಮದ್ಯದ ಅಂಗಡಿಗೆ ಇಟ್ಟು ಬರೀ ಕೈಯಲ್ಲಿ ಮನೆಗೆ ಬಂದು ಅವರನ್ನೇ ನಂಬಿರುವ ಕುಟುಂಬ ಅನ್ನವಿಲ್ಲದೆ ಹಸಿದ ಹೊಟ್ಟೆಯಿಂದ ತನ್ನೀರು ಬಟ್ಟೆ ಹಾಕಿಕೊಂಡು ಜೀವನ ಮಾಡಬೇಕಾದ ಪರಿಸ್ಥಿತಿ ಅಬಕಾರಿ ಇಲಾಖೆಯರು ತಂದು ನಿಲ್ಲಿಸಿದ್ದಾರೆಂದು ಆರೋಪ ಮಾಡಿದರು.
ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಸರ್ಕಾರ ನಿಂತಿರುವುದು ಬಡ ರೈತ ಕೂಲಿಕಾರ್ಮಿಕರ ಕುಟುಂಗಳನ್ನು ಹಾಳು ಮಾಡುವ ಮದ್ಯ ಮಾರಾಟದ ಆದಾಯದಿಂದ ಎಂಬ ಸರ್ಕಾರದ ಹೇಳಿಕೆಗೆ ಅಬಕಾರಿ ಇಲಾಖೆಗಳು ತಮಗೆ ಇಷ್ಟ ಬಂದಂತೆ ತಾಲ್ಲೂಕಿನಾದ್ಯಂತ ಮದ್ಯೆ ಮಾರಾಟಗಾರರಿಗೆ ಕಡ್ಡಾಯವಾಗಿ ತಿಂಗಳಿಗೆ ಇಷ್ಟು ಆದಾಯ ಇಲಾಖೆಗೆ ಬರುವಂತೆ ಮದ್ಯ ಮಾರಾಟ ಮಾಡುವ ಆದೇಶ ಗ್ರಾಮೀಣ ಪ್ರದೇಶದ ಬಡ ಕೂಲಿಕಾರ್ಮಿಕರ ಕುಟುಂಬಗಳನ್ನು ಬೀದಿ ಪಾಲು ಮಾಡುವ ಮುಖಾಂತರ ಸರ್ಕಾರ ಬಡವರ ಅನ್ನದ ಮೇಲೆ ಸವಾರಿ ಮಾಡುತ್ತಿರುವುದಕ್ಕೆ ಲಕ್ಷಾಂತರ ಮಹಿಳೆಯರ ಶಾಪ ತಟ್ಟುತ್ತದೆ ಎಂದು ಭವಿಷ್ಯ ನುಡಿದರು.
ಲಕ್ಷಾಂತರ ಕುಟುಂಬಗಳ ಸ್ವಾಭಿಮಾನ ಬುದುಕು ಕಟ್ಟಿಕೊಟ್ಟಿರುವ ಹಾಲಿನ ಧರ 25 ರೂಪಾಯಿ ಅದೇ ಕುಟುಂಬಗಳನ್ನು ನಾಶ ಮಾಡುವ ಮದ್ಯದ ಬೆಲೆ 150 ರಿಂದ 1000 ರೂಪಾಯಿಯವರೆಗೆ ಮಾರಾಟ ಮಾಡುತ್ತಿರುವ ಸರ್ಕಾರಕ್ಕೆ ಬಡವನ ಬದುಕಿನ ಬೆಲೆ ಗೊತ್ತಿಲ್ಲವೆಂದು ಅವ್ಯವಸ್ಥೆ ವಿರುದ್ದ ಕಣ್ಣೀರು ಹಾಕಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಡಾಬಾಗಳಲ್ಲಿ ರಾಜಾರೋಷವಾಗಿ ದಿನದ 24 ಗಂಟೆ ಅಕ್ರಮ ಮದ್ಯೆ ಮಾರಾಟ ರಾಜರೋಷವಾಗಿ ನಡೆಯುತ್ತಿದ್ದರು ತಡೆಯಬೇಕಾದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ದೂರು ನೀಡಿದಾಗ ನೆಪಮಾತ್ರಕ್ಕೆ 1 ಮತ್ತು 2 ಕೇಸು ದಾಖಲಿಸಿ ತಮ್ಮ ಪೌರುಷವನ್ನು ತೋರಿಸಿ ದಿನದ 24 ಗಂಟೆ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡುವ ಅಂಗಡಿಗಳ ವಿರುದ್ದ ಕ್ರಮ ಕೈಗೊಳ್ಳಲು ರಾಜಕೀಯ ಒತ್ತಡವೇ ಇಲ್ಲವೆ ಅವರು ನೀಡುವ ತಿಂಗಳ ಪ್ರಸಾದಕ್ಕೆ ತಮ್ಮ ಕರ್ತವ್ಯವನ್ನು ಮರತಂತೆ ಕಾಣುತ್ತಿದೆ ಅದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಅಶಾಂತಿಯ ಜೊತೆಗೆ ಗೌರವದಿಂದ ಬದುಕುವ ಕುಟುಂಬಗಳು ನೆಮ್ಮದಿಯಿಂದ ಜೀವನ ಮಾಡಲು ಸಾದ್ಯವಾಗದ ಮಟ್ಟಕ್ಕೆ ಹಳ್ಳಿಗಳು ಹದಗೆಟ್ಟಿವೆ ಎಂದು ಆರೋಪ ಮಾಡಿದರು.
24 ಗಂಟೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಮದ್ಯ ಮಾರಾಟ ಮಾಡುವ ದಂದೆಕೋರ ಹಾಗೂ ಅವರಿಗೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ಬಡ ಕೂಲಿಕಾರ್ಮಿಕರ ಸಂಸಾರಗಳನ್ನು ಉಳಿಸಬೇಕು ಇಲ್ಲವಾದರೆ ಶಾಸಕರ ಮನೆ ಮುಂದೆ ಸಾವಿರಾರು ಮಹಿಳೆಯರೊಂದಿಗೆ ಆಹೋರಾತ್ರಿ ಧರಣಿ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಬಕಾರಿ ನಿರೀಕ್ಷಕರಾದ ರೋಹಿತ್ ರವರು ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡುವ ಜೊತೆಗೆ ಅವರಿಗೆ ಸಹಕರಿಸುತ್ತಿರುವ ಅಧಿಕಾರಿಗಳಿಗೆ ನೋಟೀಸ್ ನೀಡಿ ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಕೋಟೆ ಶ್ರೀನಿವಾಸ್, ಶೇಷಾದ್ರಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ರಾಮಕ್ಕ, ವೆಂಕಟಮ್ಮ, ಕೊಲ್ಲೂರು ವೆಂಕಟ್, ರಾಜೇಂದ್ರಣ್ಣ, ಶೇಕ್‍ಷಪಿವುಲ್ಲಾ, ಕುಡುವನಹಳ್ಳಿ ಸುರೇಶ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ವಕ್ಕಲೇರಿ ಹನುಮಯ್ಯ, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ವೇಣು, ಮುದುವಾಡಿ ಗಂಗಪ್ಪ, ಲೋಕೇಶ್, ಸಹದೇವಣ್ಣ, ಗಂಗಾಧರ್, ಆಲವಾಟಿ ಶಿವ ಇನ್ನು ಮುಂತಾದವರು ಇದ್ದರು.