ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ: ರೈತರನ್ನು ಸ್ಮರಿಸುವ ವಿಶ್ವರೈತ ದಿನಾಚರಣೆ ಹಾಗೂ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಜನ್ಮದಿನವನ್ನು ರೈತಸಂಘದಿಂದ ನಗರದ ಹಳೆ ಬಸ್ ನಿಲ್ದಾಣದಲ್ಲಿ ಗ್ರಾಮೀಣ ಪ್ರದೇಶದ ಶೈಲಿಯಲ್ಲಿ ರಾಗಿ ಒಕ್ಕಣೆ ಮಾಡುವ ಸಂಪ್ರಾದಾಯದಂತೆ ಭತ್ತ, ರಾಗಿ ಮತ್ತು ತರಕಾರಿ ಹಂಚುವ ಮುಖಾಂತರ ಆಚರಣೆ ಬುಧವಾರ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ, ಭೂಮಿಯು ತಾಯಿ ಸಮಾನಳಾಗಿದ್ದು, ಆಕೆಯನ್ನು ನಂಬಿದವರಿಗೆ ಎಂದಿಗೂ ಮೋಸವಾಗುವುದಿಲ್ಲ. ನಾಡಗೀತೆಯಂತೆಯೇ ರೈತಗೀತೆಗೂ ಹೆಚ್ಚಿನ ಪ್ರಾಧಾನ್ಯತೆಯಿದ್ದು, ಕೇಳಿದಾಗ ರೋಮಾಂಚನವಾಗುತ್ತದೆ. ಆ ಹಾಡಿನಲ್ಲೇ ರೈತನ ಇಡೀ ಜೀವನವನ್ನು ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಶ್ಲಾಘಿಸಿದರು.
ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆ ತಂದ ರಾಷ್ಟ್ರದ 5ನೇ ಪ್ರಧಾನಿ ಚೌಧರಿ ಚರಣ್‍ಸಿಂಗ್ ಅವರ ಜನ್ಮದಿನದ ಸಲುವಾಗಿ ರೈತ ದಿನಾಚರಣೆಯನ್ನು ನಡೆಸಲಾಗುತ್ತಿದೆ. ಅವರಂತೆಯೇ ನಮ್ಮ ಕರ್ನಾಟಕದಲ್ಲಿಯೂ ರೈತ ಚಳುವಳಿಗೆ ಸಾಕಷ್ಟು ಇತಿಹಾಸವಿರುವುದು ನಮ್ಮ ಹೆಮ್ಮೆ ಎಂದರು.
ಕೊರೊನಾ ಸಂಕಷ್ಟದ ನಡುವೆಯೂ ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವಿಗೆ ಅಭಿಯಾನವನ್ನು ಆರಂಭಿಸಿ, ಪ್ರತಿ ತಿಂಗಳು ವರದಿಯನ್ನು ನೀಡುತ್ತಿದ್ದೇವೆ.ಸರ್ವೇ ಅಧಿಕಾರಿಗಳ ಕೊರತೆಯ ನಡುವೆಯೂ ನಾವು ಕೆಲಸ ಮಾಡುತ್ತಿದ್ದೇವೆ.
ಆದರೂ ಜಿಲ್ಲಾಡಳಿತದ ವಿರುದ್ಧ ಆದರೂ ಟೀಕೆಗಳು ಕೇಳಿ ಬರುತ್ತಲೇ ಇದ್ದು, ಅವುಗಳನ್ನು ಸ್ವಾಗತಿಸುತ್ತೇವೆ. ಇದೀಗ ರೈತ ಮುಖಂಡರು ಮಾಹಿತಿ ನೀಡಿರುವಂತೆ ಒತ್ತುವರಿಗಳ ಪಟ್ಟಿಯನ್ನು ತಮಗೆ ನೀಡಿದಲ್ಲಿ ಕ್ರಿಯಾಯೋಜನೆಯನ್ನು ರೂಪಿಸಿ, ತೆರವಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು.
ಅಂತರ್ಜಲದ ಅಗತ್ಯ ಜಿಲ್ಲೆಗೆ ಸಾಕಷ್ಟು ಇದ್ದು, ಬೇಸಿಗೆಯೂ ಬಂದಿರುವ ಕಾರಣ ಕೆರೆ, ಕಟ್ಟೆ, ಕಾಲುವೆಗಳ ಒತ್ತುವರಿ ತೆರವಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಇನ್ನು ಎಪಿಎಂಸಿ, ಹೂ ಮಾರುಕಟ್ಟೆ ಜಾಗದ ಸಮಸ್ಯೆಯ ಬಗ್ಗೆಯೂ ಸಾಕಷ್ಟು ಬಾರಿ ತಮ್ಮ ಗಮನಕ್ಕೆ ಬಂದಿದ್ದು, ಈಗಾಗಲೇ 2-3 ಕಡೆಗಳಲ್ಲಿ ನೋಡಿದ್ದ ಜಾಗವೂ ಸರಿಯಾಗಿಲ್ಲ. 10 ಎಕರೆ ಜಾಗವನ್ನು ಕಲ್ಪಿಸಲು ಜಿಲ್ಲಾಧಿಕಾರಿಗೆ ಅಧಿಕಾರ ಇರುವುದರಿಂದಾಗಿ ಎಲ್ಲ ತೊಡಕುಗಳನ್ನು ಮೀರಿ ಸಾಧ್ಯವಾದಷ್ಟು ಬೇಗನೆ ಜಾಗ ಹುಡುಕಿ ವ್ಯವಸ್ಥೆ ಮಾಡಲಾಗುವುದು.
ಅದರಲ್ಲೇ ಒಂದು ಭಾಗ ಹೂ ಮಾರುಕಟ್ಟೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ ಅವರು, ರೈತರು ಮಧ್ಯವರ್ತಿಗಳ ಲಾಭವಾಗುತ್ತಿರುವ ಹಣವನ್ನು ನೇರವಾಗಿ ಪಡೆದುಕೊಳ್ಳುವಂತಾಗಲಿ ಎಂದು ಆಶಿಸಿದರು.
ಇನ್ನು ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಜಾಗ ನೀಡಲು ಮಾತ್ರ ಸಾಧ್ಯವಾಗುತ್ತದೆ ಎಂದು ಆರೋಪಗಳು ಕೇಳಿ ಬಂದಿವೆ. ಕೈಗಾರಿಕೆಗಳಿಗೆ ಜಾಗ ನೀಡಬೇಕಾಗಿದ್ದು, ಅದಕ್ಕೆ ತಕ್ಕಂತೆ ಪರಿಹಾರವನ್ನೂ ಕಲ್ಪಿಸಿದ್ದೇವೆ. ರಾಮನಗರ ಜಿಲ್ಲೆಯಲ್ಲೇ 1 ಎಕರೆಗೆ 65 ಲಕ್ಷರೂ ಮಾತ್ರವೇ ನೀಡಲಾಗಿದ್ದು, ನಮ್ಮ ಜಿಲ್ಲೆಯ ಮಿಂಡಹಳ್ಳಿ ಬಳಿ ಎಕರೆಗೆ 1.30 ಕೋಟಿ ನೀಡಲು ಪ್ರಸ್ತಾವನೆ ಸಲ್ಲಿಸಿದ್ದೆವು, 1.10 ಕೋಟಿ ನೀಡಲು ಒಪ್ಪಿಗೆ ದೊರೆತಿದೆ. ಇವೆಲ್ಲವೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮಾಡುತ್ತಿರುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಜಿಲ್ಲೆಯಲ್ಲಿ ಮಿಶ್ರಬೇಸಾಯವಿರುವುದರಿಂದಾಗಿ ಅದಕ್ಕೆ ರೈತರು ಹೊಂದಾಣಿಕೆ ನಡೆಸಿಕೊಂಡು ಜೀವನ ನಡೆಸಿ ಆ ಮೂಲಕ ಬೇರೆ ಜಿಲ್ಲೆಯವರಿಗೆ ಮಾದರಿಯಾಗಿದ್ದಾರೆ. ಬಂಗಾರಪೇಟೆಯ ರೈತ ಚಂದ್ರಪ್ಪರೊಡನೆ ಡಿ.25ರಂದು ಪ್ರಧಾನಮಂತ್ರಿಗಳು ನೇರ ಸಂವಾದ ನಡೆಸಲಿದ್ದು, ಜಿಲ್ಲೆಯ ರೈತ ಆಯ್ಕೆಯಾಗಿರುವುದು ನಮ್ಮ ಭಾಗ್ಯವಾಗಿದೆ. ಇನ್ನೂ ಹೆಚ್ಚಿನ ರೈತರು ಇದೇ ರೀತಿ ಆಯ್ಕೆಯಾಗಬೇಕಾಗಿದೆ ಎಂದರು.
ಉಪವಿಭಾಗಾಧಿಕಾರಿಗಳಾದ ಸೋಮಶೇಖರ್ ಮಾತನಾಡಿ, ರೈತರ ಬದುಕು ಸಾಕಷ್ಟು ದುಸ್ಥರವಾಗಿದ್ದು, ಪ್ರತಿಯೊಬ್ಬರೂ ರೈತ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ನಮ್ಮ ಜಿಲ್ಲೆಯ ರೈತರಲ್ಲಿ ಧೈರ್ಯವಿರುವುದರಿಂದ ಎಷ್ಟೇ ಸಮಸ್ಯೆಯಾದರೂ ಎದುರಿಸುತ್ತಾರೆ. ಆದರೆ ಬೇರೆ ಜಿಲ್ಲೆಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದ ಅವರು, ನಮ್ಮ ಜಿಲ್ಲೆಗೆ ಕೆಸಿವ್ಯಾಲಿ ನೀರು ಬಂದಿರುವುದರಿಂದಾಗಿ ರೈತರ ಬದುಕು ಹಸನಾಗಲಿರುವುದಾಗಿ ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರೂಪಾದೇವಿ ಮಾತನಾಡಿ, ರೈತರು ಪ್ರತಿಯೊಂದಕ್ಕೂ ಬೇರೆಯವರ ಮೇಲೆ ಅವಲಂಭನೆಯಾಗುವುದು ಬೇಡ. ಸಾಕಷ್ಟು ಬಿತ್ತನೆ ಬೀಜಗಳನ್ನು ನಾವೇ ತಯಾರಿಸಿಕೊಳ್ಳಲು ಅವಕಾಶವಿರುವುದರಿಂದಾಗಿ ಅಂತಹ ಪ್ರಯತ್ನಗಳಿಗೆ ಮುಂದಾಗಿ, ಸುಸ್ಥಿತರರಾಗಬೇಕು ಎಂದು ಮನವಿ ಮಾಡಿದರು.
ಕೃಷಿಯಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿಗೆ. ರೈತರು ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿಗಧಿಪಡಿಸಿಕೊಳ್ಳಲು ಸಬಲೀಕರಣ ಅಗತ್ಯವಿದ್ದು, ಇಲಾಖೆಯಿಂದಲೂ ನಾನಾ ಯೋಜನೆಗಳನ್ನು ರೂಪಿಸುತ್ತಿರುವುದಾಗಿ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮುನಿರಾಜು ಅವರು ಮಾತನಾಡಿ, ದೇಶದಲ್ಲಿ ಶೇ.80ರಷ್ಟು ರೈತರು ಇದ್ದರೂ ಅವರು ಬೆಳೆದ ಬೆಳೆಗಳಿಗೆ ಬೆಲೆ ನಿಗಧಿಪಡಿಸಿಕೊಳ್ಳಲು ಸಾಧ್ಯವಾಗದಿರುವುದು ವಿಷಾಧಕರ ಸಂಗತಿಯಾಗಿದೆ.
ಆದರೆ ರೈತನ ಕೈಯಿಂದ ಮುಂದೆ ಹೋದ ಬೆಳೆ ಆತನ ಕಣ್ಣೆದುರಲ್ಲೇ ದುಪ್ಪಟ್ಟು, ಮೂರು ಪಟ್ಟು ಬೆಲೆಗೆ ಮಾರಾಟವಾಗುತ್ತಿರುತ್ತದೆ. ಇಷ್ಟು ಸಮಸ್ಯೆಗಳಿದ್ದರೂ ರೈತರು ಮಾತ್ರ ಈವರೆಗೂ ಹೋರಾಟಕ್ಕೆ ಬಂದಿಲ್ಲ ಎಂದ ಅವರು, ರೈತರ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಠ್ಯಪುಸ್ತಕದಲ್ಲಿ ಪಾಠ ಅವಶ್ಯಕವಿರುವುದಾಗಿ ಹೇಳಿದರು.
ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಎಸ್.ಗಣೇಶ್ ಮಾತನಾಡಿ, ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಕ್ಷೇತ್ರಗಳು ಉತ್ತಮವಾಗಿದ್ದರೆ ಸಮಾಜ ಉತ್ತಮವಾಗಿರುತ್ತದೆ. ಆದರೆ, ಕೃಷಿ ಕ್ಷೇತ್ರ ಮಾತ್ರ ಸಾಕಷ್ಟು ಹಿಂದೆ ಉಳಿದಿದ್ದು, ಸ್ವಾತಂತ್ರ್ಯ ಬಂದಾಗಿಂದಲೂ ಈ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿಕೊಂಡು ಬಂದಿರುವುದೇ ಈ ಸ್ಥಿತಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿ, ಇನ್ನಾದರೂ ಬದಲಾಗಬೇಕೆಂದು ಆಗ್ರಹಿಸಿದರು.
ದಲಿತ ಮುಖಂಡ ವಕ್ಕಲೇರಿ ರಾಜಪ್ಪ ಮಾತನಾಡಿ, ಜಿಲ್ಲೆಯಲ್ಲಿ ತರಕಾರಿ-ಹೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರೂ ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಏಷ್ಯಾದಲ್ಲೇ ದೊಡ್ಡ ಮಾರುಕಟ್ಟೆ ಎಂದು ಖ್ಯಾತಿ ಪಡೆದಿದ್ದರೂ ಟ್ರಾಫಿಕ್ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ.
ಕೈಗಾರಿಕೆಗಳಿಗೆ ಸಾವಿರಾರು ಎಕರೆ ಜಮೀನು ಕೊಟ್ಟಿರುವುದು ಸ್ವಾಗತಾರ್ಹವಾಗಿದ್ದು, ಅದರಂತೆಯೇ ಎಪಿಎಂಸಿ-ಹೂ ಮಾರುಕಟ್ಟೆಗೆ ಜಾಗ ನೀಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ರೈತಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗಗಳ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿದರೂ ತಮ್ಮ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿದ್ದಾರೆಯೇ ಹೊರತು ಒತ್ತುವರಿ ತೆರವಿಗೆ ಮುಂದಾಗಿಲ್ಲ. ನಿಮಗೂ ದಾಖಲೆಗಳನ್ನು ಸಲ್ಲಿಸುತ್ತೇವೆ ಕ್ರಮಕೈಗೊಂಡು ಒತ್ತುವರಿ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಯವರನ್ನು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ರೈತರು, ಯೋಧರು ಹಾಗೂ ಕೊರೊನಾ ವಾರಿಯರ್ಸ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಕೆಜಿಎಫ್ ಅಧ್ಯಕ್ಷ ಅಲ್ತಾಫ್ ಸೇರಿದಂತೆ ಜಿಲ್ಲಾ, ತಾಲೂಕು ಮುಖಂಡರು ಭಾಗವಹಿಸಿದ್ದರು.