ಕೇಂದ್ರದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ, ಹೋರಾಟಕ್ಕೆ ಬೆಂಬಲ ನೀಡಿ ಕೋಲಾರದಿಂದ ದೆಹಲಿಗೆ 300 ರೈತರು ಹೊರಡಲು ತೀರ್ಮಾನ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿ ಚಲೋ ಹೊರಟಿರುವ ಪಂಜಾಬ್, ಹರಿಯಾಣ ರೈತರ ಹೋರಾಟಕ್ಕೆ ಬೆಂಬಲಿಸಿ ಡಿಸೆಂಬರ್ 31ರಂದು ಕೋಲಾರ ಜಿಲ್ಲೆಯಿಂದ 300 ಮಂದಿ ರೈತರು ದೆಹಲಿ ಚಲೋ ಹೊರಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದಲ್ಲಿ ಶನಿವಾರ ನಡೆದ ಸಭೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೇಂದ್ರ ಸರ್ಕಾರವು ಜನಾಭಿಪ್ರಾಯವಿಲ್ಲದೆ ಜಾರಿಗೆ ತಂದಿರುವ ಕಾಯಿದೆಗಳನ್ನು ವಿರೋಧಿಸಿ ದೆಹಲಿ ಚಲೋ ಹೊರಟಿರುವ ಪಂಜಾಬ್, ಹರಿಯಾಣ ರೈತರು 1 ತಿಂಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ತನ್ನ ಕಾಯಿದೆಗಳನ್ನು ಸಮರ್ಥಿಸಿಕೊಳ್ಳುತ್ತಿದೆಯೇ ಹೊರತು ಇದರ ಬಗ್ಗೆ ಚರ್ಚೆ ಮಾಡಲು ಚಕಾರವೆತ್ತದೆ ಕಾರ್ಪೋರೇಟ್ ಕಂಪನಿಗಳಿಗೆ ಕೃಷಿ ಕ್ಷೇತ್ರವನ್ನು ಅಡ ಇಡಲು ಮುಂದಾಗಿರುವುದು ಸರಿಯಲ್ಲ ಎಂದು ಖಂಡಿಸಿದರು.
ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ದೇಶದ 9 ಕೋಟಿ ರೈತರಿಗೆ 18 ಸಾವಿರ ಕೋಟಿರೂಗಳನ್ನು ಪ್ರಧಾನ ಮಂತ್ರಿ ಯೋಜನೆಯಡಿ ನೀಡಿರುವುದು ಸ್ವಾಗತಾರ್ಹದ ಸಂಗತಿಯಾಗಿದೆ. ಆದರೆ ಒಂದು ಎಕರೆ ಟೊಮೆಟೊ ಬೆಳೆಯಲು ಒಂದೂವರೆ ಲಕ್ಷರೂ ಬಂಡವಾಳ ಅಗತ್ಯವಿದ್ದು, ಇಂತಹ ಪರಿಸ್ಥಿತಿಯಲ್ಲಿ ವೈಜ್ಞಾನಿಕ ಬೆಲೆ ನಿಗಧಿಪಡಿಸುವುದು ಅಗತ್ಯವಾಗಿತ್ತು.
ವಿಶೇಷ ಸಂಸತ್ ಅಧಿವೇಶವನ್ನೂ ನಡೆಸದೆ ಏಕಾಏಕಿ ಕೃಷಿ ಕಾಯಿದೆಗಳನ್ನು ಜಾರಿಗೆ ತಂದಿರುವುದನ್ನು ಖಂಡಿಸಿ ಹಾಗೂ ದೆಹಲಿ ಚಲೋ ಹೊರಟಿರುವ ರೈತರ ಹೋರಾಟವನ್ನು ಬೆಂಬಲಿಸಿ ಡಿ.31ರಂದು ಕೋಲಾರ ಜಿಲ್ಲೆಯ 300 ರೈತರು ದೆಹಲಿ ಚಲೋ ಹೊರಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐತಾಂಡಹಳ್ಳಿ ಮುನ್ನಾ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಸ್ವಸ್ತಿಕ್ ಶಿವು, ಚಾಂದ್‍ಪಾಷ, ಕಿರಣ್, ಶೇಖ್ ಬಾಬಾಜಾನ್, ನವಾಜ್‍ಪಾಷ, ಘೌಸ್ ಪಾಷ, ಜಾವೀದ್, ಸುಹೇಲ್ ಪಾಷ, ಜಮೀರ್ ಪಾಷ ಮತ್ತಿತರರು ಉಪಸ್ಥಿತರಿದ್ದರು
.