

ಕೋಲಾರ:- ಹವಾಮಾನ ಇಲಾಖೆ ಅ.2 ರಂದು ಮಳೆಯ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಿದ್ದ ಬೃಹತ್ ರಕ್ತದಾನ ಹಾಗೂ ಅಂಗಾಂಗ ದಾನ ನೋಂದಣಿ ಶಿಬಿರವನ್ನು ಒಳಂಗಾಣ ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜಿನ ಹೊಸ ಕಟ್ಟಡದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಈ ಸಂಬಂಧ ಒಳಾಂಗಣ ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿನ ಕೊಠಡಿಗಳ ಲಭ್ಯತೆ ಕುರಿತು ಪರಿಶೀಲಿಸಿದ ನಂತರ ಅಧಿಕಾರಿಗಳೊಂದಿಗೆ ಅವರು ಮಾತನಾಡುತ್ತಿದ್ದರು.
ರಕ್ತದ ಕೊರತೆಯಿಂದ ಇಂದು ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ, ಆರೋಗ್ಯ ಇಲಾಖೆಯ ವರದಿ ಪ್ರಕಾರ ಜಿಲ್ಲೆಗೆ ಪ್ರತಿ ತಿಂಗಳು 1200 ಯುನಿಟ್ ರಕ್ತದ ಅಗತ್ಯವಿದೆ, ಇದರ ಜತೆಗೆ ರಕ್ಷಣಾ ಇಲಾಖೆ ರಕ್ತನಿಧಿ, ರಾಷ್ಟ್ರೋತ್ಥಾನ ಪರಿಷತ್ ರಕ್ತನಿಧಿ, ಜಾಲಪ್ಪ ಆಸ್ಪತ್ರೆಯ ರಕ್ತನಿಧಿ, ಜಿಲ್ಲಾಸ್ಪತ್ರೆಯ ರಕ್ತನಿಧಿ ಮತ್ತಿತರ ಸಂಸ್ಥೆಗಳಿಗೆ ರಕ್ತದ ಅಗತ್ಯತೆಗೆ ಅನುಗುಣವಾಗಿ ರಕ್ತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಒಳಾಂಗಣ ಕ್ರೀಡಾಂಗಣದಲ್ಲಿ 200 ಬೆಡ್‍ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದ ಅವರು, ಇದರ ಜತೆಗೆ ಜೂನಿಯರ್ ಕಾಲೇಜಿನ ನೂತನ ಕಟ್ಟಡದ ಕೊಠಡಿಗಳಲ್ಲಿ 100 ಹಾಸಿಗೆಗಳಿಗೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ರಕ್ತದಾನಿಗಳಿಗೆ ರಕ್ತ ಕೊಟ್ಟ ನಂತರ ಹಣ್ಣು,ಜ್ಯೂಸ್ ವಿತರಿಸಲು ಕ್ರಮವಹಿಸಲಾಗಿದೆ, ದಾನಿಗಳ ಸಂಖ್ಯೆಗೆ ಅನುಗುಣವಾಗಿ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಒಳಾಂಗಣ ಕ್ರೀಡಾಂಗಣದಲ್ಲಿನ ವೀಕ್ಷಕರ ಆಸನಗಳ ಸಮೀಪ ವ್ಯವಸ್ಥೆ ಮಾಡಲಾಗಿದೆ.
ಅಂಗಾಂಗ ದಾನಕ್ಕೆ ನೋಂದಣಿ ಕಾರ್ಯ
ಒಳಾಂಗಣ ಕ್ರೀಡಾಂಗಣದ ಮುಂಭಾಗ ಮಳೆಗೆ ರಕ್ಷಣೆ ನೀಡುವಂತಹ ಜರ್ಮನ್ ಶೆಡ್ ನಿರ್ಮಿಸಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಲು ಬರುವವರಿಗೆ ಅಗತ್ಯ ಕೌಂಟರ್ ಸ್ಥಾಪಿಸಲು ಸೂಚಿಸಿದ ಅವರು, ಯಾವುದೇ ಗೊಂದಲಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಅಂಗಾಂಗ ದಾನಕ್ಕೆ ಕನಿಷ್ಟ 10 ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸುವ ನಿರೀಕ್ಷೆ ಇದ್ದು, ಇದೊಂದು ಅತ್ಯಂತ ಉಪಯುಕ್ತ ಕಾರ್ಯವಾಗಿದೆ, ಅಂಗಾಂಗ ದಾನದ ಜತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲು ದೇಹದಾನ ನೀಡುವವರೂ ಸಹಾ ಹೆಸರು ನೋಂದಾಯಿಸಬಹುದಾಗಿದೆ ಎಂದರು.
ಅಂಗಾಂಗಗಳ ವೈಪಲ್ಯದಿಂದ ಅನೇಕರು ದೇಶದಲ್ಲಿ ಜೀವನ್ಮರಣದ ಸ್ಥಿತಿಯಲ್ಲಿದ್ದಾರೆ, ಅಂತಹ ಅನೇಕರಿಗೆ ನೆರವಾಗುವ ಆಶಯವಿದೆ ಜತೆಗೆ ಅಂಗಾಂಗ ದಾನವನ್ನು ವ್ಯಾಪಾರವಾಗಿಸುವುದನ್ನು ತಪ್ಪಿಸಲು ಇದೊಂದು ಉತ್ತಮ ಪ್ರಕ್ರಿಯೆ ಎಂದು ಭಾವಿಸಿರುವುದಾಗಿ ತಿಳಿಸಿದರು.
ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ
ರಕ್ತದಾನ ನೀಡಲು ವಿದ್ಯಾರ್ಥಿಗಳು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೀಡಿದ್ದಾರೆ, ಇದರ ಜತೆಗೆ ನರಸಾಪುರ,ವೇಮಗಲ್,ಮಾಲೂರು ಕೈಗಾರಿಕಾ ಪ್ರದೇಶಗಳ ವಿವಿಧ ಕಂಪನಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು, ಅಧಿಕಾರಿಗಳು ರಕ್ತದಾನ ನೀಡಲು ಆಗಮಿಸಲಿದ್ದು, ಅವರು ಬರುವ ವಾಹನಗಳ ನಿಲುಗಡೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ಅಗತ್ಯ ವ್ಯವಸ್ಥೆ ಮಾಡಲು ಪೊಲೀಸರಿಗೆ ಸೂಚಿಸಿದರು.
ಅ.2 ರಂದು ನಡೆಯುವ ಬೃಹತ್ ರಕ್ತದಾನ ಶಿಬಿರದ ಯಶಸ್ಸಿಗೆ ಜಿಲ್ಲಾಡಳಿತದ ಅಧಿಕಾರಿಗಳು ನೌಕರರು ಸಹಕಾರ ನೀಡುವಂತೆ ಕೋರಿದ ಅವರು, ಇದರೊಂದಿಗೆ ಸ್ವಯಂಪ್ರೇರಿತರಾಗಿ ರಕ್ತದಾನ ಮತ್ತು ಅಂಗಾಂಗದಾನದ ನೋಂದಣಿಗೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಯುಕೇಶ್‍ಕುಮಾರ್, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಪಿಯು ಡಿಸಿ ರಾಮಚಂದ್ರಪ್ಪ, ನಗರಸಭೆ ಆಯುಕ್ತೆ ಸುಮಾ, ಜೂನಿಯರ್ ಕಾಲೇಜು ಪ್ರಾಂಶುಪಾಲ ನರಸಾಪುರ ಮಂಜುನಾಥ್, ವೃತ್ತ ನಿರೀಕ್ಷಕರಾದ ಹರೀಶ್‍ಕುಮಾರ್, ವೆಂಕಟರಮಣಪ್ಪ,ಬಿಜೆಪಿ ಮುಖಂಡರಾದ ಮು.ರಾಘವೇಂದ್ರ, ನಗರಸಭೆ ಆರೋಗ್ಯ ನಿರೀಕ್ಷಕರು ಸೇರಿದಂತೆ ಹಲವಾರು ಮಂದಿ ಅಧಿಕಾರಿಗಳು ಹಾಜರಿದ್ದರು.

