ಕನ್ನಡ ಶಾಲೆಗಳ ಉಳಿವಿಗೆ ರಾಜ್ಯಾದ್ಯಂತ ರಾಹುಲ್ ರವರಿಂದ ಸೈಕಲ್ ಜಾಥಾ ಜಿಲ್ಲಾಧಿಕಾರಿಗೆ ಮನವಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಫೆ.25 : ಅಳಿವಿನ ಅಂಚಿನಲ್ಲಿರುವ ಕನ್ನಡ ಶಾಲೆಗಳ ಉಳಿವಿಗೆ ತುಮಕೂರಿನ ಜಯ ಕರ್ನಾಟಕ ಸಂಘಟನೆಯ ರಾಹುಲ್ ರವರು ರಾಜ್ಯಾದ್ಯಂತ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಈಗಾಗಲೇ 28 ಜಿಲ್ಲೆಗಳು ಮುಗಿಸಿ 3 ಸಾವಿರದಷ್ಟು ಕಿಲೋ ಮೀಟರ್ ಸಂಚರಿಸಿದ್ದು ಇಂದು ಕೋಲಾರ ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ರವರಿಗೆ ಮನವಿ ಪತ್ರವನ್ನು ನೀಡಿ ಆಗ್ರಹಿಸಲಾಯಿತು
ನಂತರ ಮಾತನಾಡಿದ ರಾಹುಲ್ ರವರು ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸುತ್ತ ನಮ್ಮ ಸರ್ಕಾರಿ ಕನ್ನಡ ಶಾಲೆಗಳ ಖಾಸಗಿ ಸಂಸ್ಥೆಗಳ ಹೊಡೆತಕ್ಕೆ ಸಿಲುಕಿ ಅಳಿವಿನ ಅಂಚಿನಲ್ಲಿವೆ, ಹಾಗೂ ಎμÉ್ಟೂೀ ಶಾಲೆಗಳಿಗೆ ಸರ್ಕಾರದಿಂದ ಬರುತ್ತಿರುವ ಅನುದಾನವು ಸರಿಯಾದ ಸಮಯಕ್ಕೆ ಮುಖ್ಯೋಪಾಧ್ಯಾಯರ ಕೈ ಸೇರದ ಕಾರಣ ಶಾಲಾ ಅಭಿವೃದ್ಧಿ ಕಾರ್ಯವು ನಡೆಯುತ್ತಿಲ್ಲ. ಇನ್ನು ಸುಮಾರು ಶಾಲೆಗಳಲ್ಲಿ ಅಧ್ಯಾಪಕರ ಕೊರತೆಯಿಂದ, ಸರಿಯಾದ ಬೋಧನ ಕೊಠಡಿ ಇರದ ಕಾರಣ, ಶೌಚಾಲಯದ ಕೊರತೆಗಳಿಂದ ಕೂಡಿರುವ ನಮ್ಮ ಸರ್ಕಾರಿ ಶಾಲೆಗಳಿಗೆ ಅನುದಾನವನ್ನು ಸರಿಯಾದ ಸಮಯಕ್ಕೆ ನೀಡಿ, ನಮ್ಮ ಶಾಲೆಗಳಲ್ಲಿರುವ ಕೊರತೆಗಳನ್ನು ಬಗೆಹರಿಸಿ.ಮುಚ್ಚುತ್ತಿರುವ ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸಬೇಕಾಗಿದೆ ಎಂದು ಮನವಿ ಮಾಡಿದರು.
ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಶಾಸಕರು ಅಳಿವಿನಂಚಿನಲ್ಲಿರುವ ಕನ್ನಡ ಶಾಲೆಗಳು ಉಳಿಯುವಂತೆ ಮಾಡಲು ಹೊರಟಿರುವ ನಿಮ್ಮ ಈ ಕಾರ್ಯ ಯಶಸ್ವಿಯಾಗಲಿ ಎಂದ ಶಾಸಕರು ನಾನು ಶಾಸನ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಶಾಲೆಗಳನ್ನು ಉಳಿಸುವಂತೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿರುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಸಿಂಗ್, ಜಿಲ್ಲಾ ಸಂಚಾಲಕ ವಿ.ಜಗದೀಶ್ ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು