ಕೋಲಾರ:- ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ರಾಹುಲ್ ಗಾಂಧಿ ಪರವಾಗಿ ರಾಜ್ಯ ಆಹಾರ ಸಚಿವ ಹಾಗೂ ಜಿಲ್ಲೆಯ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಸಾರ್ವಜನಕ ಸಭೆಯಲ್ಲಿ ಮಾತನಾಡಿದ ಸಚಿವರು. ತಾವು ಯುಪಿಯ ಸರ್ಕಾರದಲ್ಲಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ರವರ ಸಚಿವ ಸಂಪುಟದಲ್ಲಿ ರೈಲ್ವೆ ಇಲಾಖೆಯ ರಾಜ್ಯ ದರ್ಜೆ ಸಚಿವರಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ರಾಯಬರೇಲಿ ವ್ಯಾಪ್ತಿಯಲ್ಲಿ ಕೈಗೊಂಡ ಜನಪರ ಕಾರ್ಯಗಳ ಕುರಿತು ಮತದಾರರ ಗಮನ ಸೆಳೆದರು.
ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡರು ಮಾತನಾಡಿ, ರಾಯಬರೇಲಿಯಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಯ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸಿದ ಕೀರ್ತಿ ಕರ್ನಾಟಕ ಆಹಾರ ಸಚಿವ ಕೆಹೆಚ್. ಮುನಿಯಪ್ಪ ನವರಿಗೆ ಸಲ್ಲುತ್ತದೆ ಎಂದು ತಿಳಿಸಿ, ಇದರಿಂದ 15 ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸಿದಂತಾಗಿದ್ದು ಪ್ರಸ್ತುತ ಕೆಲಸ ನಿರ್ವಹಿಸುತ್ತಿದ್ದಾರೆ ಮತ್ತು ಈ ರೈಲ್ವೆ ಕೋಚ್ ಪ್ಯಾಕ್ಟರಿಯಿಂದ ಅಲ್ಲಿನ ಭೂಮಿಯ ಬೆಲೆ ಹೆಚ್ಚಾಗಿದೆ ಎಂದು ತಿಳಿಸಿದರು.
ಭೂಸಾರಿಗೆ ಸಚಿವರಿದ್ದಾಗ ರಾಯಬರೇಲಿಯ ಎಲ್ಲಾ ಸುತ್ತಮುತ್ತಲಿನ ರಸ್ತೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದನ್ನು ಅವರು ಸ್ಮರಿಸಿದರು.
ಸಚಿವ ಮುನಿಯಪ್ಪ ಮಾತನಾಡಿ, ಯುಪಿಎ ಸರ್ಕಾರದಲ್ಲಿ ರಾಜ್ಯ ರೈಲ್ವೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ತನ್ನ ಲೋಕಸಭಾ ಕ್ಷೇತ್ರವಾದ ಕೋಲಾರಕ್ಕಾಗಲೀ ಅಥವಾ ಬೆಂಗಳೂರಿಗೆ ಭೇಟಿ ನೀಡದೇ ರಾಯಬರೇಲಿಗೆ ಬಂದು ಇಲ್ಲಿ ಜನಪರ ಕೆಲಸ ಮಾಡಿದ್ದನ್ನು ಸ್ಮರಿಸಿದರು.
2004ರಲ್ಲಿ ಕಾಂಗ್ರೇಸ್ ನೇತೃತ್ವದ ಸಮಿಶ್ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ರವರು ಕೋಚ್ ಪ್ಯಾಕ್ಟರಿ ಮಂಜೂರು ಮಾಡಿದ್ದು, ತದನಂತರ ನಾನು ರಾಜ್ಯ ರೈಲ್ವೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಉತ್ತರ ಪ್ರದೇಶ ರಾಜ್ಯದ ರಾಯಬರೇಲಿಯಲ್ಲಿ ಜಮೀನನ್ನು ಗ್ರಾಮ ಪಂಚಾಯಿತಿಯಿಂದ ಮಂಜೂರು ಮಾಡಿಸಿ, ಇರ್ಕಾನ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಮೂಲಕ ರಾಯಬರೇಲಿಯಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಯನ್ನು ನಿರ್ಮಿಸಿದ್ದಾಗಿ ವಿವರಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 10ವರ್ಷಗಳ ಆಡಳಿತದಲ್ಲಿ ಯಾವುದೇ ಜನಪರವಾದ ಕೆಲಸಗಳನ್ನು ಮಾಡಲಿಲ್ಲ ಎಂದು ಆರೋಪಿಸಿದ ಅವರು, ನಮ್ಮ ಸರ್ಕಾರ ಬಂದ ತಕ್ಷಣ ನಾವು ಯುವಕರಿಗೆ ಉದ್ಯೋಗ ಕಲ್ಪಿಸಿ ಬಡವರ ಮತ್ತು ಶ್ರಮಿಕರ ,ರೈತರ ಪರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರವು ಬಡವರ, ಶೋಷಿತರ ಹಾಗೂ ರೈತರಪರವಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದು ಜನಪರವಾದ ಆಡಳಿತವನ್ನು ನೀಡುತ್ತದೆ. ಅಂದಿನಿಂದ ಇಂದಿನವರೆಗೂ ರಾಯಬರೇಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಸತತವಾಗಿ ಸೋನಿಯಾ ಗಾಂಧಿಯವರು ಗೆಲುವನ್ನು ಸಾಧಿಸಿದ್ದು ಇದೀಗ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು ಅವರ ಪರವಾಗಿ ಇಂದು ರಾಯಬರೇಲಿಯಲ್ಲಿ ಮತಯಾಚನೆ ಮಾಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತರಪ್ರದೇಶದ ಮುಖಂಡರು ಹಾಗೂ ಎಐಸಿಸಿ ಸದಸ್ಯರಾದ ದಯಾನಂದ ಶುಕ್ಲಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಐಸಿಸಿ ಸದಸ್ಯರು, ಡಿಸಿಸಿ ನಾಯಕರು ,ಹಾಗೂ ಕಾರ್ಯಕರ್ತರ ಉಪಸ್ಥಿತರಿದ್ದರು.
ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ರಾಹುಲ್ ಗಾಂಧಿ ಪರವಾಗಿ ರಾಜ್ಯ ಆಹಾರ ಸಚಿವ ಹಾಗೂ ಜಿಲ್ಲೆಯ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪ್ರಚಾರ ನಡೆಸಿದರು.
ಉತ್ತರ ಪ್ರದೇಶ ರಾಜ್ಯದ ರಾಯಬರೇಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ಗಾಂಧಿ ಪರ ಪ್ರಚಾರ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕ ಗಾಂಧಿರನ್ನು ಭೇಟಿ ಮಾಡಿದ ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಮಾತುಕತೆ ನಡೆಸಿದರು.