ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕುಂದಾಪುರ , ಗ್ರಾಮಪಂಚಾಯತ್ ಕಂದಾವರ ಮತ್ತು ಪಶು ಆಸ್ಪತ್ರೆ ಕುಂದಾಪುರ ಇವರ ಜಂಟಿ ಸಹಭಾಗಿತ್ವದಲ್ಲಿ ಕಂದಾವರ ಗ್ರಾಮಪಂಚಾಯತ್ ನಲ್ಲಿ ರೇಬೀಸ್ ನಿರೋಧಕ ಲಸಿಕಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದ ಆಧ್ಯಕ್ಷತೆಯನ್ನು ವಹಿಸಿದ ಕಂದಾವರ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅನುಪಮಾ ಯು ಶೆಟ್ಟಿ ಇವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಂದಾಪುರ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಬಾಬಣ್ಣ ಪೂಜಾರಿಯವರು ಮಾತನಾಡುತ್ತ, ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಸಂತಾನಹರಣ ಕಾರ್ಯಕ್ರಮಗಳಿಂದ ನಾಯಿಗಳ ಸಂತತಿ ಕ್ಷೀಣಿಸುತ್ತಿದ್ದರೂ, ಆಗಾಗ ರೇಬೀಸ್ ಪ್ರಕರಣಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು, ರೇಬೀಸ್ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ, ನಾಯಿಗಳಿಗೆ ರೇಬೀಸ್ ನಿರೋಧಕ ಲಸಿಕೆಯನ್ನು ನೀಡುವುದು ಅತೀ ಅವಶ್ಯಕವಾಗಿದೆ ಎಂದರು.
ಈ ಲಸಿಕಾ ಶಿಬಿರದಲ್ಲಿ ಕಂದಾವರ ಪಂಚಾಯತ್ ನ ವಿವಿಧ ಸ್ಥಳಗಳಲ್ಲಿ ಕರೆತರಲಾದ ಸುಮಾರು 158 ಕ್ಕೂ ಮಿಕ್ಕಿ ಶ್ವಾನಗಳಿಗೆ ಉಚಿತವಾಗಿ ರೇಬೀಸ್ ನಿರೋಧಕ ಲಸಿಕೆಯನ್ನು ನೀಡಲಾಯ್ತು. ಕಂದಾವರ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಶ್ರೀ ಚಂದ್ರಶೇಖರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯದರ್ಶಿ ಶ್ರೀ ಸಂಜೀವರವರು ಧನ್ಯವಾದ ಸಲ್ಲಿಸಿದರು.
ಪಶು ಆಸ್ಪತ್ರೆ ಕುಂದಾಪುರ ಸಿಬ್ಬಂದಿಯವರು, ಕಂದಾವರ ಪಶುಸಖಿ ಸುನೀತಾ, ಬಳ್ಕೂರು ಪಶುಸಖಿ ಸುನೀತಾ, ಪಂಚಾಯತ್ ಸಿಬ್ಬಂದಿಯವರಾದ ಮಹಾಬಲ, ಶ್ರೀಮತಿ ಪುಷ್ಬ ಮುಂತಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಪಂಚಾಯತ್ ಸದಸ್ಯರಾದ ಶ್ರೀ ಶೀನ ಪೂಜಾರಿ, ಶ್ರೀಮತಿ ಶೋಭಾ, ಶ್ರೀ ಅಭಿಜಿತ್ ಕೊಠಾರಿ, ಶ್ರೀಮತಿ ಜ್ಯೋತಿ ಉಪಸ್ಥಿತರಿದ್ದರು.