JANANUDI.COM NETWORK
” ಪ್ರತಿ ದಿನವೂ ಒಂದೊಂದು ಹೊಸ ಹಿಂದಿ ಶಬ್ಧವನ್ನು ಕಲಿಯುವುದರ ಮೂಲಕ ರಾಷ್ಟ್ರಭಾಷಾಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ದಿನನಿತ್ಯದ ಸಂವಹನದಲ್ಲಿ ಬಳಸುವ ಮೂಲಕ ಮಾತ್ರ ಭಾಷೆಯೊಂದು ಸದಾಜೀವಂತವಾಗಿರುವುದಲ್ಲದೇ, ಸತತ ವೃದ್ಧಿಗೊಳ್ಳುವುದು. ” ಎಂದು ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ‘ ಹಿಂದಿ ದಿವಸ್ ‘ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಸ್ರೂರಿನ ನಿವೇದಿತಾ ಪ್ರೌಢ ಶಾಲೆಯ ಮಾಜಿ ಮುಖ್ಯೋಪಾಧ್ಯಾಯರೂ, ಹಿಂದಿ ಶಿಕ್ಷಕರೂ ಆದ ಶ್ರೀ ದಿನಕರ್ ಆರ್. ಶೆಟ್ಟಿಯವರು ಕರೆ ನೀಡಿದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜಯಶೀಲಾ ಪೈಯವರು ಅತಿಥಿಗಳನ್ನು ಸ್ವಾಗತಿಸಿ, ತಮ್ಮ ಪ್ರಸ್ತಾವನಾ ನುಡಿಗಳಲ್ಲಿ ನಮ್ಮೆಲ್ಲರ ಅಭಿಮಾನದ ರಾಷ್ಟ್ರಭಾಷೆ ಹಿಂದಿಯ ಬೆಳವಣಿಗೆಯ ಅಗತ್ಯತೆಯನ್ನು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ಹಿಂದಿ ಭಾಷೆಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಲು ಹೇಗೆ ಸಹಕಾರಿಯಾಗುವುದೆಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಹಿಂದಿ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಹಿಂದಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯವರಾದ ಶ್ರೀ ದಿನಕರ್. ಆರ್ . ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ದ್ವಿತೀಯ ಪಿ.ಯು ತರಗತಿಯ ಸಮೃದ್ಧಿ ಕಿಣಿ ವಿವಿಧ ಹಿಂದಿ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳ ಬಹುಮಾನ ವಿತರಣಾ ಪಟ್ಟಿಯನ್ನು ವಾಚಿಸಿದರು. ದ್ವಿತೀಯ ಪಿ.ಯು.ಸಿ ಯ ವಿದ್ಯಾರ್ಥಿ ಪವನ್ ಧನ್ಯವಾದ ಸಲ್ಲಿಸಿದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಸಮೃದ್ಧಿ ಕಾರ್ಯಕ್ರಮ ನಿರೂಪಿಸಿದರು.