ಕೋಲಾರ,ಆ.12: ಜಿಲ್ಲೆಯ ವಸತಿ ಶಾಲೆಗಳಲ್ಲಿ ಒಂದಲ್ಲ ಒಂದು ರೀತಿಯ ಘಟನೆಗಳು ವಿದ್ಯಾರ್ಥಿಗಳ ಮೇಲೆ ನಡೆಯುತ್ತಲೇ ಇದ್ದು, ಜಿಲ್ಲಾಡಳಿತ ಮಾತ್ರ ಯಾವುದೇ ಕಟ್ಟುನಿಟ್ಟಿನ ಕ್ರಮವಿಲ್ಲದೆ ಇರುವುದು ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ದೂರಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚಿನ ದಿನಗಳಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಕಳೆದ ಕೆಲ ತಿಂಗಳ ಹಿಂದೆ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಯಲುವಹಳ್ಳಿ ಗ್ರಾಮದ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕೈಯಲ್ಲಿ ಸಿಬ್ಬಂದಿ ಮಲ ಎತ್ತಿಸುವ ಮೂಲಕ ಮಕ್ಕಳನ್ನು ಬಳಕೆ ಮಾಡಿಕೊಂಡಿದ್ದ ಘಟನೆ, ಬೃಂದಾವನ ವೃತ್ತ (ಕೋರ್ಟ್ ಸರ್ಕಲ್) ನ ಬಾಲಕಿಯರ ವಿಧ್ಯಾರ್ಥಿ ನಿಲಯದ ವಿದ್ಯಾರ್ಥಿಯ ತಟ್ಟೆಯಲ್ಲಿ ಹಲ್ಲಿ ಬಿದ್ದ ಘಟನೆ, ಕೋಲಾರ ತಾಲೂಕಿನ ಅಮ್ಮನಲ್ಲೂರು ಗ್ರಾಮ ಅಂಬೇಡ್ಕರ್ ವಸತಿ ನಿಲಯಲ್ಲಿ ಬೆಳಗಿನ ತಿಂಡಿ ತಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಇಂತಹ ಘಟನೆಗಳು ನಡೆಯುತ್ತಿದ್ದರೂ ಸಹ ಜಿಲ್ಲಾಡಳಿತ ಮಾತ್ರ ಇದಕ್ಕೂ ತಮ್ಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುವ ನಿಟ್ಟಿನಲ್ಲಿ ಕೋಲಾರ ಜಿಲ್ಲಾಡಳಿತ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಅದಕ್ಕೆ ಜಿಲ್ಲೆಯ ಕೆಲ ವಸತಿ ವಿದ್ಯಾರ್ಥಿ ನಿಲಯದ ವಾರ್ಡನ್ ಮತ್ತು ಸಿಬ್ಬಂದಿಗಳು ಮನಸೋ ಇಚ್ಛೆ ಬಂದಂತೆ ವಿದ್ಯಾರ್ಥಿಗಳ ಜೀವದ ಜತೆಯಲ್ಲಿ ಚಲ್ಲಾಟವಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಇಂತಹ ಘಟನೆಗಳು ನಡೆದರೆ, ಕ್ರಮ ವಹಿಸುವ ಜವಾಬ್ದಾರಿ ಯಾರದ್ದು ಎಂದು ಪ್ರಶ್ನೆಸಿದ್ದಾರೆ.
ಇಂತಹ ಘಟನೆಗಳು ನಡೆದ ಮೇಲೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ತಾಲೂಕು, ಜಿಲ್ಲಾ, ರಾಜ್ಯ, ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳುವ ಮೊದಲೇ, ಇದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಸತಿ ಹಾಗೂ ಇತರೆ ವಸತಿ ಹಾಸ್ಟೆಲ್ಗಳಿಗೆ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಭೇಟಿ ಮತ್ತು ಹಾಸ್ಟೆಲ್ ವಾರ್ಡನ್ ಮತ್ತು ಸಿಬ್ಬಂದಿಗಳ ಸಭೆಯನ್ನು ನಡೆಸಿ ಎಚ್ಚರಿಸುವ ಕೆಲಸವನ್ನು ಮಾಡಬೇಕಾಗಿದೆ. ಆದರೆ ಇನ್ನೂ ಜಿಲ್ಲೆಯ ಶಾಸಕರು ತಮ್ಮ ಕಚೇರಿಗಳಿಗೆ ಮತ್ತು ಅಧಿಕಾರಿಗಳು ಕಚೇರಿಗಳಿಗೆ ಮಾತ್ರ ಸೀಮಿತವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಸತಿ ಹಾಸ್ಟೆಲ್ ಸಿಬ್ಬಂದಿ ಮತ್ತು ವಾರ್ಡನ್ ಗಳು ಮಕ್ಕಳನ್ನು ವಯುಕ್ತಿಕ ಕೆಲಸಗಳಿಗೂ ಸಹ ಮಕ್ಕಳನ್ನು ಬಳಸಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ, ಈ ನಿಟ್ಟಿನಲ್ಲಿ ಚುರುಕು ಮುಟ್ಟಿಸುವ ಜತೆಯಲ್ಲೇ ವಿದ್ಯಾರ್ಥಿಗಳ ಸುರಕ್ಷತೆಗೆ ವಸತಿ ಹಾಸ್ಟೆಲ್ ಭೇಟಿ ಪರಿಶೀಲನೆ ಅಗತ್ಯವಿದೆ ಎಂದರು.