ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಶ್ರೀನಿವಾಸಪುರ ತಾಲ್ಲೂಕಿನ ಪಡತಿಮ್ಮನಹಳ್ಳಿ ಗ್ರಾಮದ ಪಿ.ಎಸ್.ಗೋವರ್ಧನ್ ಮನೆಗೆ ಹಿಂದಿರುಗಿದರು. ತಾಯಿ ಗೀತಾ, ತಂದೆ ಪಿ.ಎನ್.ಶಿವಾರೆಡ್ಡಿ ಸಿಹಿ ತಿನ್ನಿಸಿ ಬರಮಾಡಿಕೊಂಡರು.
ಉಕ್ರೇನ್‌ನ ವಿನ್ನಿಟ್ಸಿಯಾ ನ್ಯಾಷನಲ್ ಪಿರೊಗೊವ್ ಮೆಮೊರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 4ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದ ಪಿ.ಎಸ್.ಗೋವರ್ಧನ್, ಉಕ್ರೇನ್ ಮೇಲೆ ರಷ್ಯಾ ಯುದ್ಧ ಪ್ರಾರಂಭಿಸಿದ ಮೇಲೆ ಗೋವರ್ಧನ್ ವಿನ್ನಿಟ್ಸಿಯಾದಲ್ಲಿನ ಹಾಸ್ಟೆಲ್ ಬಂಕರ್‌ನಲ್ಲಿ ಉಳಿದುಕೊಂಡಿದ್ದರು. ದೇಶದಲ್ಲಿ ಯುದ್ಧದ ತೀವ್ರತೆ ಹೆಚ್ಚಾದಾಗ ಆಹಾರ ಹಾಗೂ ನೀರಿನ ಕೊರತೆ ಕಾಡಿತ್ತು. ಆತಂಕದ ನಡುವೆ ದಿನ ದೂಡಿದ್ದ ಅವರು, ಸ್ನೇಹಿತರು ಮತ್ತು ಅನ್ಯ ದೇಶೀಯರ ಜತೆ 800 ಮೈಲಿ ದೂರ ಬಸ್ಸಿನಲ್ಲಿ ಪ್ರಯಾಣಿಸಿ, ಸುಮಾರು 10 ಕಿ.ಮೀಗೂ ಹೆಚ್ಚು ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ಹಂಗೇರಿ ಪ್ರವೇಶಿಸಿದ್ದರು.
‘ನಾವು ಕಾಲೇಜು ಹಾಸ್ಟೆಲ್‌ನಲ್ಲಿದ್ದಾಗ ಗುಂಡಿನ ಸದ್ದು ಕೇಳಿಸುತ್ತಿತ್ತು. ಬಂಕರ್‌ಗಳು ವಿದ್ಯಾರ್ಥಿಗಳಿಂದ ತುಂಬಿಹೋಗಿದ್ದವು. ವಿಶ್ವವಿದ್ಯಾಲಯದ ಸಿಬ್ಬಂದಿ ನಮ್ಮನ್ನು ಬಾತ್ ರೂಂಗಳಲ್ಲಿ ರಕ್ಷಣೆ ಪಡೆಯುವಂತೆ ಹೇಳಿತ್ತು. ಭಾರಿ ಶಬ್ದ ಕಿವಿಗೆ ಅಪ್ಪಳಿಸುತ್ತಿತ್ತು. ಕಿವಿಗೆ ಹತ್ತಿ ಇಟ್ಟುಕೊಳ್ಳಲು ಸಲಹೆ ಮಾಡಿದ್ದರು. ವೈದ್ಯಕೀಯ ಕಾಲೇಜಿನಿಂದ ಹಂಗೇರಿ ಗಡಿಗೆ ಹೋಗಲು ಬಸ್ ವ್ಯವಸ್ಥೆ ಮಾಡಲಾಗಿತ್ತು. 800 ಕಿ.ಮೀ ಪ್ರಯಾಣಿಸಿ, ನಂತರ ಕಾಲ್ನಡಿಗೆಯಲ್ಲಿ ಉಕ್ರೇನ್ ಗಡಿ ದಾಟಿ ಹಂಗೇರಿ ಪ್ರವೇಶಿಸಿದ ಮೇಲೆ ಆತಂಕ ಕಡಿಮೆಯಾಯಿತು’ ಎಂದು ಗೋವರ್ಧನ್ ತಿಳಿಸಿದರು.
‘ಗಡಿಯಿಂದ 400 ಕಿ.ಮೀ ರೈಲಿನಲ್ಲಿ ಪ್ರಯಾಣಿಸಿ ಹಂಗೇರಿ ರಾಜಧಾನಿ ಬುಡಾಪೆಸ್ಟ್ ತಲುಪಿದೆವು. ಅಲ್ಲಿ ಭಾರತದ ರಾಯಭಾರಿ ಕಚೇರಿ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ನಮ್ಮನ್ನು ಆದರದಿಂದ ಬರಮಾಡಿಕೊಂಡರು. ಊಟ, ನೀರು ಕೊಟ್ಟರು. ಉಳಿದುಕೊಳ್ಳಲು ಆಶ್ರಯ ನೀಡಿದರು. ಹೊರ ದೇಶದಲ್ಲಿ ನಮ್ಮವರ ಪ್ರೀತಿ ಕಂಡು ಹೃದಯ ತುಂಬಿ ಬಂದಿತು’ ಎಂದು ತೇವಗೊಂಡಿದ್ದ ಕಣ್ಣುಗಳನ್ನು ಒರೆಸಿಕೊಂಡರು.
‘ಹಂಗೇರಿ ಜನರು ತುಂಬಾ ಒಳ್ಳೆಯವರು. ಅವರು ನಿರಾಶ್ರಿತರನ್ನು ತಮ್ಮ ಮನೆಗಳಿಗೆ ಕರೆದೊಯ್ದು ಅತಿಥಿಗಳಂತೆ ಪ್ರೀತಿಯಿಂದ ನೋಡಿಕೊಂಡರು.. ತಮ್ಮ ಮನೆಗಳಲ್ಲಿಯೇ ಉಳಿಸಿಕೊಂಡು ಆಹಾರ ನೀಡಿ ಧೈರ್ಯ ತುಂಬಿದರು. ಸಂಕಷ್ಟದ ನಡುವೆ ತಾಯ್ನಾಡಿನ ಜನರ ಪ್ರೀತಿಯೂ ನನ್ನನ್ನು ಮೂಖ ವಿಸ್ಮಿತನ್ನಾಗಿಸಿತ್ತು’ ಎಂದು ಮೆಚ್ಚುಗೆ ವ್ಯಕ್ತಿಪಡಿಸಿದರು.
‘ಬುಡಾಪೆಸ್ಟ್‌ನಿಂದ ಭಾರತ ಸರ್ಕಾರದ ಪ್ರತಿನಿಧಿಗಳು ನಮ್ಮನ್ನು ವಿಮಾನದಲ್ಲಿ ದೆಹಲಿಗೆ ಕರೆದುತಂದರು. ಅಲ್ಲಿಂದ ಸರ್ಕಾರವೇ ನಮ್ಮನ್ನು ವಿಮಾನದಲ್ಲಿ ಬೆಂಗಳೂರಿಗೆ ಕರೆದುತಂದಿತು. ಅನ್ಯದೇಶದಲ್ಲಿ ಆತಂಕದ ನಡುವೆ ಬದುಕುತ್ತಿದ್ದ ನಮ್ಮನ್ನು ಹುಟ್ಟೂರಿಗೆ ಕರೆತಂದ ಸರ್ಕಾರಕ್ಕೆ ಋಣಿಯಾಗಿದ್ದೇವೆ. ಅಲ್ಲಿ ಸಿಕ್ಕಿಹಾಕಿಕೊಂಡಿರುವ ನಾಗರಿಕರು ಹಾಗೂ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ’ ಎಂದು ಹೆಮ್ಮೆಯಿಂದ ಹೇಳಿದರು.
‘ಅಲ್ಲಿನ ವೈದ್ಯಕೀಯ ವಿಶ್ವವಿದ್ಯಾಲಯ ಆನ್‌ಲೈನ್ ತರಗತಿ ನಡೆಸುವುದಾಗಿ ಸಂದೇಶ ಕಳುಹಿಸಿದೆ. ಯುದ್ಧ ನಿಂತ ಬಳಿಕ ಅಲ್ಲಿಗೆ ಕರೆಸಿಕೊಳ್ಳುವ ಭರವಸೆ ನೀಡಿದೆ. ನಮ್ಮ ಸರ್ಕಾರದ ಕ್ಷಿಪ್ರ ಕಾರ್ಯಾಚರಣೆ ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ವರದಾನವಾಗಿದೆ’ ಎಂದು ಅಭಿಪ್ರಾಯಪಟ್ಟರು