

ಕೋಲಾರ: ಜನರ ಚಳಿ ಬಿಡಿಸುತ್ತಿರುವ ಕೊರೊನಾ ಹೊಸ ತಳಿ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ರೋಗ ಲಕ್ಷಣಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರದ ಮೂಲಕ ಜಾಗೃತಿ ಮೂಡಿಸಬೇಕೆಂದು ರೈತಸಂಘದಿಂದ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೊರೊನಾ 1ನೇ, 2ನೇ ಅಲೆಯ ಅವಧಿಯಲ್ಲಿ ಸೃಷ್ಠಿಸಿದ್ದ ಅವಾಂತರಗಳಿಂದ ಜನಸಾಮಾನ್ಯರು ಚೇತರಿಸಿಕೊಂಡು ಸಹಜ ಜೀವನದತ್ತ ಮುನ್ನಡೆಯುತ್ತಿರುವ ಸಮಯದಲ್ಲಿ ಮುಂಗಾರು ಮಳೆಯ ಆರ್ಭಟದ ನಂತರ ಈಗ ಮತ್ತೆ ಚೀನಾ ಮತ್ತಿತರರ ದೇಶಗಳಲ್ಲಿ ಹೆಚ್ಚುತ್ತಿರುವ ರೂಪಾಂತರ ಕೊರೊನಾ ಹೊಸತಳಿಯಿಂದ ದೇಶದಲ್ಲಿ ಮುನ್ನೆಚ್ಚರಿಕೆಯಾಗಿ ಜಾಗೃತಿವಹಿಸಬೇಕಾದ ಜವಾಬ್ದಾರಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ಮೇಲಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಕಾಣಿಸಿಕೊಂಡ ರೋಗ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯವಿದ್ದ ಆಕ್ಸಿಜನ್ ಬೆಡ್ ವೆಂಟಿಲೇಟರ್ ಮತ್ತಿತರರ ಸೌಲಭ್ಯಗಳಿಲ್ಲದೆ ಖಾಸಗಿ ದುಬಾರಿ ವೆಚ್ಚ ಭರಿಸಲಾಗದೆ ಕಣ್ಣಮುಂದೆಯೇ ಸಾವಿರಾರು ಜನರನ್ನು ಕುಟುಂಬಸ್ಥರು ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆಗಳು ಕಣ್ಣ ಮುಂದೆಯೇ ಇವೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಹೊಸ ತಳಿ ನಿಯಂತ್ರಣಕ್ಕೆ ಮುಂಜಾಗ್ರತವಾಗಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ಮೆಡಿಸಿನ್ ಮತ್ತಿತರ ಸೌಲಭ್ಯಗಳನ್ನು ಕಾಯ್ದಿರಿಸುವ ಜೊತೆಗೆ ಯಾವುದೇ ಕಾರಣಕ್ಕೂ ರೋಗ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ಕಡ್ಡಾಯವಾಗಿ ಚಿಕಿತ್ಸೆ ಪಡೆದುಕೊಳ್ಳುವ ದಿನದ 24 ಗಂಟೆ ವೈದ್ಯಕೀಯ ಸೇವೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ನಗರಕ್ಕೆ ಗ್ರಾಮೀಣ ಪ್ರದೇಶಗಳಿಂದ ರೈತರು, ಕೂಲಿ ಕಾರ್ಮಿಕರು ಹೆಚ್ಚಾಗಿ ಮಾರುಕಟ್ಟೆ ಮತ್ತಿತರ ಬದುಕು ಕಟ್ಟಿಕೊಳ್ಳಲು ಬರುವ ಜನತೆಗೆ ಹೊಸ ತಳಿಯ ರೋಗ ಲಕ್ಷಣಗಳ ಬಗ್ಗೆ ಕರಪತ್ರದ ಮೂಲಕ ಹಳ್ಳಿಹಳ್ಳಿಯಲ್ಲೂ ಜಾಗೃತಿ ಮೂಡಿಸಿ ಗಡಿ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆ ಇಲ್ಲದಂತೆ ನೇಮಕ ಮಾಡಿ ಹೊಸ ತಳಿಯ ಕೊರೊನಾ ರೂಪಾಂತರಿ ತಳಿಯನ್ನು ಮೊದಲೇ ತಡೆದು ಯಾವುದೇ ಪ್ರಾಣ ಹಾನಿಯಾಗದಂತೆ ಜಾಗೃತಿವಹಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿಎಚ್‍ಒ ಡಾ.ಜಗದೀಶ್ ಅವರು, ಆರೋಗ್ಯ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಮುಂಜಾಗ್ರತವಾಗಿ ಬೆಡ್, ವೆಂಟಿಲೇಟರ್ ಮತ್ತಿತರ ಸೌಲಭ್ಯಗಳನ್ನು ರೋಗಿಗಳಿಗೆ ಕಾಯ್ದಿರಿಸುವಂತೆ ಸೂಚಿಸಲಾಗಿದೆ. ಕರಪತ್ರದ ಮುಖಾಂತರ ಗ್ರಾಮೀಣ ಪ್ರದೇಶಗಳಲ್ಲಿ ರೋಗ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವ ಭರವಸೆಯನ್ನು ನೀಡಿದರು.
ಮನವಿ ಸಲ್ಲಿಸುವಾಗ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಮಂಗಸಂದ್ರ ತಿಮ್ಮಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಯಾರಂಘಟ್ಟ ಗಿರೀಶ್, ಮಂಗಸಂದ್ರ ವೆಂಕಟೇಶ್, ಯಲ್ಲಪ್ಪ, ಮಾಸ್ತಿ ವೆಂಕಟೇಶ್, ಯಲುವಳ್ಳಿ ಪ್ರಭಾಕರ್, ತೆರ್ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ್, ಮಂಜುಳಮ್ಮ, ಶೇಷಾದ್ರಿ, ವೆಂಕಟ್ ಮುಂತಾದವರಿದ್ದರು.
