ಶ್ರೀನಿವಾಸಪುರ; ಡಿ.31: ಕೆಸಿವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಿ ಒತ್ತುವರಿಯಾಗಿರುವ ಸರ್ಕಾರಿ ಆಸ್ತಿಗಳನ್ನು ತೆರವುಗೊಳಿಸಲು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ಅವರೆಕಾಯಿ ವಹಿವಾಟಿಗೆ ಸೂಕ್ತ ಜಾಗ ಗುರುತಿಸಲು ಜ.3ರ ಶುಕ್ರವಾರ ಖಾಲಿ ಬಿಂದಿಗೆಗಳು, ಅವರೆಕಾಯಿ ಸಮೇತ ತಾಲೂಕು ಕಚೇರಿ ಮುಂದೆ ಹೋರಾಟ ಮಾಡಲು ತೋಟಗಾರಿಕೆ ಆವರಣದಲ್ಲಿ ಕರೆದಿದ್ದ ರೈತಸಂಘದ ಮುಖಂಡರು ಪತ್ರಿಕಾ ಹೇಳಿಕೆ ಮುಖಾಂತರ ತಿಳಿಸಿದರು.
ನಗರದ ಎಂಜಿ ರಸ್ತೆಯಲ್ಲಿ ನಡೆಯುತ್ತಿರುವ ಅವರೇಕಾಯಿ ವಹಿವಾಟನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಇಲ್ಲವೇ ಸೂಕ್ತ ಜಾಗವನ್ನು ಗುರುತಿಸುವಲ್ಲಿ ತಾಲೂಕು ಆಡಳಿತ ನಗರಸಭೆ ವಿಫಲವಾಗಿದೆ. 3 ತಿಂಗಳ ರೈತರ ಕಷ್ಟ ಮೂರೇ ನಿಮಿಷದಲ್ಲಿ ವ್ಯಾಪಾರಸ್ಥರು ಹರಾಜು ಹಾಕಿ ರೈತರ ಶೋಷಣೆ ಮಾಡುತ್ತಿದ್ದರೂ ಸಮಸ್ಯೆ ಗಂಭೀರವಾಗಿ ಏಕೆ ಪರಿಗಣಿಸುತ್ತಿಲ್ಲ. ಜೊತೆಗೆ ಆ ರಸ್ತೆಯಲ್ಲಿ ಹೆಚ್ಚಾಗಿ ಜನಸಂದಣಿ, ತುರ್ತು ಪರಿಸ್ಥಿತಿಯಲ್ಲಿ ಬರುವ ಆಂಬ್ಯುಲೆನ್ಸ್ ಗಳಿಗೆ ಜಾಗವಿಲ್ಲದೆ ಪರದಾಡಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ನೀಡಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ತಾಲೂಕು ಆಡಳಿತವನ್ನು ಒತ್ತಾಯಿಸಿದರು.
ಜಿಲ್ಲೆಗೆ ಹರಿಯುತ್ತಿರುವ 2ನೇ ಹಂತದ ಶುದ್ಧೀಕರಣದ ಕೆಸಿವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡುವ ಮುಖಾಂತರ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಹರಿಸಬೇಕು. ಜೊತೆಗೆ ವಾಣಿಜ್ಯ ಬೆಳೆಗಳಿಗೆ ಬಾಧಿಸುತ್ತಿರುವ ಸೊಳ್ಳೆ ನಿಯಂತ್ರಣಕ್ಕೆ ಸರ್ಕಾರದಿಂದಲೇ ಉಚಿತವಾದ ಗುಣಮಟ್ಟದ ಔಷಧಿ ನೀಡುವ ಮುಖಾಂತರ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಇತ್ತೀಚೆಗೆ ವಾಯುಭಾರ ಕುಸಿತದಿಂದ ಪದೇಪದೇ ಬರುತ್ತಿರುವ ಜಡಿಮಳೆಯಿಂದ ನಷ್ಟವಾಗಿರುವ ರಾಗಿ ಹಾಗೂ ವಾಣಿಜ್ಯ ಬೆಳೆ ಸಮೀಕ್ಷೆ ಮಾಡಿ ನಷ್ಟ ಪರಿಹಾರಕ್ಕೆ 100 ಕೋಟಿ ಪರಿಹಾರದ ಹಣ ಬಿಡುಗಡೆ ಮಾಡಿ ಪ್ರತಿ ಎಕರೆಗೆ 3 ಲಕ್ಷಪರಿಹಾರ ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, 5 ವರ್ಷಗಳಿಂದ ಜಿಲ್ಲೆಯ ಟೊಮೇಟೊ ಬೆಳೆಗಾರರು ಬೀದಿಗೆ ಬಿದ್ದಿದ್ದಾರೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆಯುತ್ತಿರುವ ಬೆಳೆಗೆ ಬಾಧಿಸುತ್ತಿರುವ ಸೊಳ್ಳೆ ಊಜಿ, ಬೆಂಕಿ ರೋಗದಿಂದ ಸಂಪೂರ್ಣವಾಗಿ ಬೆಲೆ ಕುಸಿತಕಂಡು ಟೊಮೇಟೊ ಬೆಳೆಗಾರರು ವಿಮುಕ್ತಿ ಹೊಂದುತ್ತಿರುವ ಜೊತೆಗೆ ಕೆಸಿವ್ಯಾಲಿ ನೀರು ಹರಿದ ನಂತರ ಜಿಲ್ಲೆಯ ಬೆಳೆಗಳು ವಿಷಕಾರಿಯಾಗುತ್ತಿವೆ ಎಂದು ತೋಟಗಾರಿಕೆ ವಿಜ್ಞಾನಿಗಳ ವರದಿ ರೈತರಿಗೆ ತಲೆನೋವಾಗಿದೆ. ಒಂದು ಕಾಲದಲ್ಲಿ ಇಡೀ ದೇಶಕ್ಕೆ ಹಾಲು, ತರಕಾರಿ, ಚಿನ್ನ ಕೊಟ್ಟಂತಹ ಕೀರ್ತಿಯಿರುವ ಕೋಲಾರ ಜಿಲ್ಲೆಗೆ ವಿಷಕಾರಿ ಅಂಶ ಎಂಬ ಅಣೆಪಟ್ಟ ಕಟ್ಟುತ್ತಿರುವುದು ನ್ಯಾಯವೇ ಎಂದು ವಿಜ್ಞಾನಿಗಳನ್ನು ಪ್ರಶ್ನಿಸಿದರು.
ಪೂರ್ವಜರು ಬೆವರು ಸುರಿಸಿ ಕಟ್ಟಿ ಬೆಳೆಸಿದ ಕೆರೆಗಳು ಇಂದು ಪ್ರಭಾವಿ ರಾಜಕಾರಣಿಗಳ ಭೂ ರಿಯಲ್ ಎಸ್ಟೇಟ್ ಭೂಗಳ್ಳರ ಕೆಟ್ಟ ದೃಷ್ಠಿ ಬಿದ್ದು ಸಂಪೂರ್ಣವಾಗಿ ಒತ್ತುವರಿಯಾಗಿದ್ದು, ದಾಖಲೆಗಳ ಸಮೇತ ತೆರವುಗೊಳಿಸುವಂತೆ ಕಂದಾಯ ಅಧಿಕಾರಿಗಳಿಗೆ ದೂರು ನೀಡಿದರೂ ಕನಿಷ್ಠ ಒತ್ತುವರಿದಾರರಿಗೆ ನೋಟೀಸನ್ನೂ ನೀಡದೆ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಿ ಮುಂಗಾರುಮಳೆ ಸಮಯದಲ್ಲಿ ಸಮರ್ಪಕವಾದ ರಾಜಕಾಲುವೆಗಳಿಲ್ಲದೆ ಕೆರೆಗೆ ಹರಿಯಬೇಕಾದ ಮಳೆ ನೀರು ರೈತರ ಬೆಳೆಗಳಿಗೆ ಹರಿದು 3 ತಿಂಗಳ ಕಷ್ಟದ ಫಲ ಮೂರೇ ನಿಮಿಷದಲ್ಲಿ ನೀರು ಪಾಲಾಗಿರುವುದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕು ಆಡಳಿತವನ್ನು ಒತ್ತಾಯಿಸಿ ಜ.3ರ ಶುಕ್ರವಾರದಂದು ಖಾಲಿ ಬಿಂದಿಗೆಗಳೊಂದಿಗೆ ತಾಲೂಕು ಕಚೇರಿ ಮುಂದೆ ಹೋರಾಟ ಮಾಡುವ ನಿರ್ಧಾರ ಕೈಗೊಳ್ಳಲಾಯಿತೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಶಿವಾರೆಡ್ಡಿ, ಮಂಗಸಂದ್ರ ತಿಮ್ಮಣ್ಣ, ಆನಂದರೆಡ್ಡಿ, ಯಲ್ಲಣ್ಣ, ಹರೀಶ್, ಆಲವಾಟಿ ಶಿವು, ಷಫೀಉಲ್ಲಾ, ರಾಜೇಂದ್ರಗೌಡ ಮುಂತಾದವರಿದ್ದರು.