ಕೋಲಾರ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾಗೆ ಆಗ್ರಹಿಸಿ ಕೋಲಾರ ರೈತಸಂಘದ ಮುಖಂಡರು ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳು ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಭಾವಚಿತ್ರಕ್ಕೆ ಹಾಲು, ಮೊಸರಿನಿಂದ ಅರ್ಚನೆ ಮಾಡಿದ ಮುಖಂಡರು, ಚುನಾವಣೆಗೆ ಮೊದಲು ಘೋಷಿಸಿರುವಂತೆಯೇ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳು ಬಂದು ನಮ್ಮ ಮನವಿಯನ್ನು ಸ್ವೀಕರಿಸಿ ಭರವಸೆ ನೀಡುವವರೆಗೂ ಜಾಗ ಬಿಟ್ಟು ಹೋಗುವುದಿಲ್ಲವೆಂದು ಪಟ್ಟುಹಿಡಿದರು. ಈ ವೇಳೆ ಪೊಲೀಸರು ಹಾಗೂ ಸಂಘಟನೆಯ ಮುಖಂಡರೊಂದಿಗೆ ಮಾತಿನ ಚಕಮಕಿಗಳಾದವು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತಸಂಘದ ಕೋಲಾರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, 5 ಗ್ಯಾರೆಂಟಿಗಳನ್ನು ಘೋಷಿಸಿರುವ ರಾಜ್ಯ ಸರಕಾರಕ್ಕೆ 6ನೇ ಗ್ಯಾರೆಂಟಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಯೋಜನೆಯು ನುಂಗಲಾರದ ತುತ್ತಾಗಿದೆ. ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ವಿಚಾವಾಗಿ ಈಗಾಗಲೇ ಜಿಲ್ಲೆಯಾದ್ಯಂತ ಸಾಕಷ್ಟು ಹಳ್ಳಿಗಳಲ್ಲಿ ಸಾಲ ಮರುಪಾವತಿ ಮಾಡದೇ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೊಟ್ಟ ಮಾತಿನಂತೆ ಸಾಲಮನ್ನಾ ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಚುನಾವಣೆಗೆ ಮೊದಲು ಜಿಲ್ಲೆಯ ವೇಮಗಲ್‍ನಲ್ಲಿ ನಡೆದಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿಯೂ ಭರವಸೆ ನೀಡಿದ್ದರು. ಅವರು ಹೇಳಿದ ಮಾತನ್ನು ಕೇಳಿ ಇಂದು ಮತ ನೀಡಿ ಮಹಿಳೆಯರು ತಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ. ಅದೇ ರೀತಿ ನಮಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸಿ ಅವರ ಮಾತನ್ನು ಉಳಿಸಿಕೊಳ್ಳಲಿ ಎಂದು ಆಗ್ರಹಿಸಿದರು.
ಮಹಿಳಾ ಸಂಘಗಳ ಪದಾಧಿಕಾರಿಗಳಾದ ಚೌಡಮ್ಮ, ಶೈಲಜಾ ಮಾತನಾಡಿ, ಮಾತನಾಡಿ ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ ಹಾಲು ಮೊಸರು ಅರ್ಚನೆ ಮಾಡಿ ಸ್ತ್ರೀಶಕ್ತಿ ಸಾಲಮನ್ನಾ ಮಾಡುವಂತೆ ಆಗ್ರಹಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಅಂದು ಕೊಟ್ಟ ಮಾತಿನಂತೆಯೇ ನಡೆದುಕೊಂಡು ಇಂದು ಸಾಲಮನ್ನಾ ಮಾಡಲೇ ಬೇಕೆಂದು ಆಗ್ರಹ ಮಾಡಿದರು.
ನಾವು ಯಾವುದೇ ಕಾರಣಕ್ಕೂ ಸಾಲವನ್ನು ಮರುಪಾವತಿ ಮಾಡುವುದಿಲ್ಲ. ಈ ಬಗ್ಗೆ ಜಿಲ್ಲೆಯಾದ್ಯಂತ ಮಹಿಳೆಯರು ಆಕ್ರೋಶಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ, ಸರಕಾರದ ಮುಂದಿನ ಆದೇಶದವರೆಗೂ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ತೆರಳದಂತೆ ಸೂಚಿಸಿದ್ದಾರೆ.
ಸದ್ಯ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇದ್ದು, ಸಾಲ ಮನ್ನಾ ಮಾಡದೆ ಹೀಗೆಯೇ ನಿರ್ಲಕ್ಷಿಸಿಕೊಂಡು ಹೋಗಿದ್ದೇ ಆದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆಗುವ ಅನಾಹುತಗಳಿಗೆ ಮುಖ್ಯಮಂತ್ರಿಗಳೇ ನೇರ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿ, ಕೂಡಲೇ ಸಾಲಮನ್ನಾ ಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನರಸಿಂಹಯ್ಯ, ಯಾರಂಘಟ್ಟ ಗಿರೀಶ್, ನಾರಾಯಣಗೌಡ, ವೆಂಕಟಮ್ಮ, ರಾಧಮ್ಮ, ಶೋಭ, ಸುಗುಣ, ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.