ಕೋಲಾರ ಪೌರಾಯುಕ್ತರ ಸರ್ವಾಧಿಕಾರಿ ಧೋರಣೆ ಆರೋಪ ಅಧ್ಯಕ್ಷರಿಂದ ಪ್ರತಿಭಟನೆ: ಸದಸ್ಯರ ಗಲಾಟೆ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

ಕೋಲಾರ: ನಗರಸಭೆ ಪೌರಾಯುಕ್ತರ ಸರ್ವಾಧಿಕಾರಿ ಧೋರಣೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದ್ದು ಕೂಡಲೇ ಅಧಿಕಾರಿಯನ್ನು ಎತ್ತಂಗಡಿ ಮಾಡಬೇಕೆಂದು ಆಗ್ರಹಿಸಿ ಅಧ್ಯಕ್ಷರು-ಉಪಾಧ್ಯಕ್ಷರ ಜತೆಗೂಡಿ ಸದಸ್ಯರು ಪ್ರತಿಭಟನೆ ನಡೆಸಿದರು. ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಅಧ್ಯಕ್ಷೆ ಶ್ವೇತಾ ಆರ್. ಶಬರೀಶ್ ಅವರು ಟಿಪ್ಪಣಿಯನ್ನು ಕೊಡಲು ಮುಂದಾದಾಗ ಪೌರಾಯುಕ್ತರಾದ ಸುಮ ಅವರು ಪಟ್ಟಿಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದು ಆಡಳಿತಾತ್ಮಕ ವಿಷಯಗಳನ್ನು ಮಾತ್ರವೇ ಮಂಡಿಸುವುದಾಗಿ ಹೇಳಿದಾಗ ಇಬ್ಬರ ನಡುವೆ ಅಸಮಾಧಾನ ಉಂಟಾಗಿತ್ತು. ಮಂಗಳವಾರ ಸಭೆ ಆರಂಭ ಆಗುತ್ತಿದ್ದಂತೆಯೇ ಅಧ್ಯಕ್ಷರು ಸಮಸ್ಯೆಗಳನ್ನು ಮುಂದಿಟ್ಟಾಗ ಚರ್ಚೆ ಮಾಡಲು ನಿರಾಕರಿಸಿದ ಪೌರಾಯುಕ್ತರ ನಿಲುವನ್ನು ಸದಸ್ಯರು ಖಂಡಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಶ್ವೇತಾಶಬರೀಶ್ ಅವರು, ಸಂಸದರ ಕೈ ಗೊಂಬೆಯಂತೆ ಆಡುತ್ತಿರುವ ಪೌರಾಯುಕ್ತರು ನಗರಸಭೆಯಲ್ಲಿ ರಾಜಕೀಯ ಮಾಡುತ್ತಿದ್ದು ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಅಸಹಕಾರ ತೋರುತ್ತಿದ್ದಾರೆ. ಸದಸ್ಯರ ವಾರ್ಡ್‍ಗಳಲ್ಲಿನ ಸಮಸ್ಯೆಗಳ ಕುರಿತು ಚರ್ಚೆ ಮಾಡಲೂ ನಿರಾಕರಿಸುತ್ತಿರುವುದು ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ. ನಗರಸಭೆಯಲ್ಲಿ ಹಣ ಕೊಳೆಯುತ್ತಿದ್ದರೂ ಸದಸ್ಯರ ವಾರ್ಡ್‍ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹಿಂದೇಟು ಹಾಕುತ್ತಿದ್ದು ಬಂಗಾರಪೇಟೆ ಸರ್ಕಲ್‍ನಲ್ಲಿ ರಿಂಗ್ ಹಾಕಿಸಲು ಮನವಿ ಮಾಡಿದರೆ ಆಗುವುದಿಲ್ಲ ಎಂದರು. ಆದರೆ ಗುತ್ತಿಗೆದಾರರ ಜತೆಗೂಡಿ ನಗರಸಭೆ ಸದಸ್ಯರ ಗಮನಕ್ಕೂ ತಾರದೇ ರಿಂಗ್ ಹಾಕುವ ಕಾಮಗಾರಿ ಮಾಡಿಸುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ನಗರದಲ್ಲಿ ರಸ್ತೆಗಳನ್ನು ಹಾಕಿಸಲು ಬೇಡ ಎನ್ನುತ್ತಿರುವ ಪೌರಾಯುಕ್ತರು ಹೊಸ ನಗರಸಭೆ ಕಚೇರಿ ಕಟ್ಟಡ ನಿರ್ಮಾಣಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಸುಮಾ ಅವರನ್ನು ಎತ್ತಂಗಡಿ ಮಾಡಲು ಮನವಿ ಸಲ್ಲಿಸಲಾಗಿದ್ದು ಈ ನಡುವೆ ಇಷ್ಟು ತೊಂದರೆ ಮಾಡುವ ಮೂಲಕ ಕೋಲಾರದ ಅಭಿವೃದ್ಧಿ ಆಗದಂತೆ ತಡೆಯುತ್ತಿದ್ದಾರೆ ಎಂದು ಅಧ್ಯಕ್ಷೆ ಶ್ವೇತಾ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ ಬಹುತೇಕ ಸದಸ್ಯರು ತಮಗೆ ಸಭೆ ನಡೆಯುವ ಕುರಿತು ಮಾಹಿತಿ ನೀಡಿಲ್ಲ ಎಂದು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡಾಗ ಪೋನ್ ಮಾಡಿ ಹೇಳಿರುವುದಾಗಿ ಸಿಬ್ಬಂದಿ ನಟರಾಜ್ ಉತ್ತರಿಸಿದರು. ಇದರಿಂದ ಕಿಡಿಕಿಡಿಯಾದ ಸದಸ್ಯರು ನಗರಸಭೆ ಮೀಟಿಂಗ್‍ಗೆ ಸದಸ್ಯರಿಗೆ
ಪೋ
ನಿನ್‍ನಲ್ಲಿ ಹೇಳುವುದು ಕಾನೂನಿನಲ್ಲಿ ಇದೆಯಾ ಎಂದು ಪ್ರಶ್ನಿಸಿದಾಗ ಪೌರಾಯುಕ್ತರ ಬದಲಿಗೆ ಆರಿಸಿದ ಸದಸ್ಯರು ಉತ್ತರಿಸಲು ಮುಂದಾದಾಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಮೌನಕ್ಕೆ ಶರಣಾಗಿದ್ದ ಪೌರಾಯುಕ್ತರು ಏನೊಂದೂ ಮಾತನಾಡದೆ ಸಭೆಯಿಂದ ನಿರ್ಗಮಿಸಿದಾಗ ಜ.4 ರಂದು ಸಭೆ ನಡೆಸುವುದಾಗಿ ಅಧ್ಯಕ್ಷೆ ಶ್ವೇತಾಶಬರೀಶ್ ಸಭೆಗೆ ಮಾಹಿತಿ ನೀಡಿದರಲ್ಲದೆ ಸದಸ್ಯರು ನೀಡುವ ಪಟ್ಟಿ ಮತ್ತು ಪೌರಾಯುಕ್ತರ ವಿಷಯಗಳನ್ನು ಸೇರಿಸಿ ಅಜೆಂಡಾ ಮಾಡುವುದಾಗಿ ಸಭೆಗೆ ಮಾಹಿತಿ ನೀಡಿದರು.
ಈ ನಡುವೆ ಸಭೆ ನಡೆಯಲೇಬೇಕೆಂದು ಪಟ್ಟು ಹಿಡಿದ ಸದಸ್ಯರಾದ ಮುರಳಿಗೌಡ ಮತ್ತು ಪ್ರವೀಣ್ ಗೌಡರಿಗೆ ಕೋರಂ ಕೊರತೆ ಉಂಟಾದ ಕಾರಣ ಸಭೆಯನ್ನು ಜ.4ಕ್ಕೆ ಅನಿವಾರ್ಯವಾಗಿ ಮುಂದೂಡಲಾಯಿತು.