ಕೋಲಾರ:- ನಗರದ 14 ಕೇಂದ್ರಗಳಲ್ಲಿ ಜೂ.30 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಯಾವುದೇ ಅವ್ಯವಹಾರ,ಗೊಂದಲಗಳಿಗೆ ಅವಕಾಶವಿಲ್ಲದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಟಿಇಟಿ ಪರೀಕ್ಷಾ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೋಲಾರ ನಗರದ ಒಟ್ಟು 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಳಗಿನ ಅಧಿವೇಶನ 9-30ರಿಂದ 12ರವರೆಗೂ ಪತ್ರಿಕೆ-1ರ ಪರೀಕ್ಷೆ 9 ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನ 2 ರಿಂದ 4-30 ರವರೆಗೂ ಪತ್ರಿಕೆ-2ರ ಪರೀಕ್ಷೆ 14 ಕೇಂದ್ರಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕೆ-1 ಬೆಳಗ್ಗೆ 9-30 ರಿಂದ 12 ಗಂಟೆವರೆಗೂ 9 ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಯಲಿದ್ದು, ಒಟ್ಟು 2142 ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಪತ್ರಿಕೆ-2ರ ಪರೀಕ್ಷೆ ಮಧ್ಯಾಹ್ನ 2 ರಿಂದ 4-30ರವರೆಗೂ ನಡೆಯಲಿದ್ದು, 3394 ಮಂದಿ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು.
144ನೇ ಸೆಕ್ಷನ್ನಿ ಷೇದಾಜ್ಞೆ ಜಾರಿ
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿ ಮಾಡಿದ್ದು, ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ 200 ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬೆಳಗ್ಗೆ 8-30 ರಿಂದ ಸಂಜೆ 4-30 ರವರೆಗೂ ಮುಚ್ಚಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಸತತ ವಿದ್ಯುತ್
ಒದಗಿಸಲು ತಾಕೀತು
ಪರೀಕ್ಷೆ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಎದುರಾಗದಂತೆ ಕ್ರಮವಹಿಸಲು ಬೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದ ಡಿಸಿಯವರು, 14 ಪರೀಕ್ಷಾ ಕೇಂದ್ರಗಳಿಗೂ ಪೊಲೀಸ್ ಬಂದೋಬಸ್ತ್ ಒದಗಿಸಲು ಪೊಲೀಸ್ ಇಲಾಖೆಗೆ ಸೂಚಿಸಿದರು.
ಗೌಪ್ಯ ಸಾಮಗ್ರಿಗಳನ್ನು ಖಜಾನೆಯಲ್ಲಿ ಸಂರಕ್ಷಿಸಲು ತ್ರಿಸದಸ್ಯ ಸಮಿತಿ ರಚಿಸಿದ್ದು, ಅದರಲ್ಲಿ ಅಪರ ಡಿಸಿಯವರು, ಡಿಡಿಪಿಐ ಕೃಷ್ಣಮೂರ್ತಿ, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ ಅವರು ಇದ್ದಾರೆ ಎಂದು ತಿಳಿಸಿದರು. ಪ್ರಶ್ನೆಪತ್ರಿಕೆ ಕೇಂದ್ರಗಳಿಗೆ ತಲುಪಿಸಲು, ಉತ್ತರ ಪತ್ರಿಕೆ ಬಂಡಲ್ಗಳನ್ನು ಖಜಾನೆಗೆ ಸಾಗಿಸುವ 9 ಮಾರ್ಗಾಧಿಕಾರಿಗಳ ವಾಹನಗಳಿಗೂ ಬಂದೋಬಸ್ತ್ ಒದಗಿಸಲಾಗಿದೆ ಎಂದರು.
ಕುಡಿಯುವ ನೀರಿಗೆ ಕ್ರಮವಹಿಸಿ-ಸಿಇಒ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಬಸವಂತಪ್ಪ ಅವರು ಮಾತನಾಡಿ,ಪರೀಕ್ಷಾರ್ಥಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸಿ, ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ನಗರದಲ್ಲೇ 14 ಕೇಂದ್ರಗಳ ವಿವರ
ಡಿಡಿಪಿಐ ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿ, ಪ್ರವೇಶದ್ವಾರ, ಕೇಂದ್ರದ ಕಾರಿಡಾರ್, ಬಂಡಲ್ ಕಟ್ಟುವ ಕಚೇರಿಯಲ್ಲಿ ಸಿಸಿ ಕ್ಯಾಮರಾ ವೀಡಿಯೋ ಕವರೇಜ್ಅನ್ನು ಪ್ರತಿ ಕೇಂದ್ರದಲ್ಲೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರದಲ್ಲೇ ಎಲ್ಲಾ 14 ಕೇಂದ್ರಗಳಿದ್ದು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ 2 ಕೇಂದ್ರಗಳು, ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ 2 ಕೇಂದ್ರಗಳು, ಚಿನ್ಮಯ ವಿದ್ಯಾಲಯದಲ್ಲಿ 2 ಕೇಂದ್ರ, ಮಹಿಳಾ ಸಮಾಜದಲ್ಲಿ 2 ಹಾಗೂ ಸುಭಾಷ್ ಶಾಲೆಯಲ್ಲಿ 2 ಕೇಂದ್ರಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಉಳಿದಂತೆ ಬೆಂಗಳೂರು ಮಾಂಟೋಸ್ಸರಿ ಶಾಲೆಯಲ್ಲಿ ಒಂದು, ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂದು ಕೇಂದ್ರ, ಮೆಥೊಡಿಸ್ಟ್ ಶಾಲೆಯಲ್ಲಿ ಒಂದು ಕೇಂದ್ರ, ಎಂಬಿ ರಸ್ತೆಯ ಸೆಂಟ್ಸ್ ಆನ್ಸ್ ಶಾಲೆಯಲ್ಲಿ ಒಂದು ಕೇಂದ್ರ ರಚಿಸಲಾಗಿದೆ ಎಂದು ತಿಳಿಸಿದರು.
ಉಳಿದಂತೆ
ಟಿಇಟಿ ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ, ಮಾಹಿತಿ ನೀಡಿ, ಸುಗಮ ಪರೀಕ್ಷೆಗೆ ಎಲ್ಲಾ ಅಗತ್ಯ ಸಿದ್ದತೆ ಮಾಡಿದ್ದು, ಎಲ್ಲಾ 14 ಕೇಂದ್ರಗಳಿಗೂ 14 ಮುಖ್ಯಅಧೀಕ್ಷಕರು, 14 ಮಂದಿ ಸ್ಥಾನಿಕ ಜಾಗೃತದಳ ಅಧಿಕಾರಿಗಳು, 9 ಮಾರ್ಗಗಳಿಗೂ ಮಾರ್ಗಾಧಿಕಾರಿಗಳು, 210 ಮಂದಿ ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ ವೀಕ್ಷಕರಾಗಿ ಡಯಟ್ ಪ್ರಾಂಶುಪಾಲ ಕೆ.ಎನ್.ಜಯಣ್ಣ ಕಾರ್ಯ ನಿರ್ವಹಿಸುವರು ಎಂದು ತಿಳಿಸಿದರು.
ಪರೀಕ್ಷಾರ್ಥಿಗಳಿಗೆ ಹಲವು ಸೂಚನೆ
ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಕಡ್ಡಾಯವಾಗಿ 3 ಇತ್ತೀಚಿನ ಭಾವಚಿತ್ರ ಹಾಗೂ ಪ್ರವೇಶ ಪತ್ರದೊಂದಿಗೆ ಒಂದು ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದ ಅವರು, ಪರಿಕ್ಷಾ ಕೇಂದ್ರದಲ್ಲಿ ಡಿಜಿಟಲ್ ವಾಚ್, ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಪದ್ಮಬಸವಂತಪ್ಪ, ನಿಕಟಪೂರ್ವ ಅಪರ ಡಿಸಿ ಡಾ.ಶಂಕರ್ ವಾಣಿಕ್ಯಾಳ್, ಜಿಲ್ಲಾಖಜಾನಾಧಿಕಾರಿ ಮಹೇಂದ್ರ, ಡಿಹೆಚ್ಒ ಡಾ.ಜಗದೀಶ್, ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಮುನಿವೆಂಕಟರಾಮಾಚಾರಿ, ಮುನಿಲಕ್ಷ್ಮಯ್ಯ, ಶಿಕ್ಷಣಾಧಿಕಾರಿ ಸಗೀರಾ ಅಂಜುಂ, ಡಿವೈಪಿಸಿ ಗುರುಮೂರ್ತಿ, ವಿಷಯ ಪರಿವೀಕ್ಷಕರಾದ ಶಶಿವಧನ, ಎವೈಪಿಸಿ ಮೋಹನ್ ಬಾಬು ಮತ್ತಿತರರಿದ್ದರು.