ಅಧಿಕಾರಿಗಳು, ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ಅಗತ್ಯವಾದ ಮಾರ್ಗದರ್ಶನ ಮಾಡಬೇಕು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ಅಧಿಕಾರಿಗಳು, ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ಅಗತ್ಯವಾದ ಮಾರ್ಗದರ್ಶನ ಮಾಡಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ತಾಲ್ಲೂಕಿನ ಗುಂದೇಡು ಗ್ರಾಮದಲ್ಲಿ ಬುಧವಾರ ನೂತನ ಕ್ಷೀರಭವನ ಉದ್ಘಾಟಿಸಿ ಮಾತನಾಡಿದ ಅವರು, ಗುಂದೇಡು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಡಿಮೆ ಸಂಖ್ಯೆಯ ಸದಸ್ಯರಿದ್ದರೂ, ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡುವುದರ ಮೂಲಕ ಮಾದರಿಯಾಗಿ ಅಭಿವೃದ್ಧಿ ಸಾಧಿಸಿದ್ದಾರೆ ಎಂದು ಹೇಳಿದರು.
ಕ್ಷೀರಭವನ ನಿರ್ಮಿಸಲು ಹಾಲು ಒಕ್ಕೂಟದಿಂದ ರೂ.2 ಲಕ್ಷ, ಕರ್ನಾಟಕ ಹಾಲು ಮಹಾ ಮಂಡಳಿಯಿಂದ ರೂ.3 ಲಕ್ಷ ಬಿಡುಗಡೆ ಮಾಡಲಾಗಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಹಾಲು ಸಂಘಗಳ ಅಭಿವೃದ್ಧಿಗೆ ಅಗತ್ಯವಾದ ನೆರವು ನೀಡಲಾಗುವುದು ಎಂದು ಹೇಳಿದರು.
ಕೋಚಿಮುಲ್ ಮಾಜಿ ನಿರ್ದೇಶಕ ಪಾಲ್ಯ ಎಂ.ಬೈರಾರೆಡ್ಡಿ, ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಹಾಲು ಉತ್ಪಾದನೆ ಕುರಿತು ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಬಾಬುರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಸಂಘದ ಅಧ್ಯಕ್ಷ ಜಯರಾಮರೆಡ್ಡಿ ಇದ್ದರು
.