ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಬೇಕು : ನಿರ್ದೇಶಕ ಎನ್.ಹನುಮೇಶ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಬಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ನಿವೃತ್ತ ನೌಕರರಿಗೆ ಸೌಲಭ್ಯ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದನೆ ರೈತರ ಉಪ ಕಸುಬಾಗಿ ಯಶಸ್ವಿಯಾಗಿದೆ. ಹೈನೋದ್ಯಮ ರೈತರ ನಿಜವಾದ ಬೆನ್ನೆಲುಬಾಗಿ ಮಾರ್ಪಟ್ಟಿದೆ. ಅದನ್ನು ಶ್ರದ್ಧೆಯಿಂದ ಮಾಡಬೇಕು. ವೈಜ್ಞಾನಿಕ ಪದ್ಧತಿ ಅನುಸರಿಸಿ ರಾಸು ಪಾಲನೆ ಮಾಡಬೇಕು ಎಂದು ಹೇಳಿದರು.
ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಮಾತನಾಡಿ, ಬೇಸಿಗೆಯಲ್ಲಿ ಹಾಲಿನ ಗುಣಮಟ್ಟ ರಕ್ಷಿಸಲು ಹಸುಗಳನ್ನು ನೆರಳಿನಲ್ಲಿ ಇರುವಂತೆ ನೊಡಿಕೊಳ್ಳಬೇಕು. ನೀರಿನಲ್ಲಿ ಗೋಣಿ ಚೀಲ ನೆನೆಸಿ ಹಸುಗಳ ಬೆನ್ನಿನ ಮೇಲೆ ಹಾಕಬೇಕು. ಹಸುಗಳಿಗೆ ಹಸಿರು ಹಾಗೂ ಒಣ ಮೇವಿನ ಜತೆಗೆ ಪಶು ಆಹಾರ, ಖನಿಜ ಮಿಶ್ರಣ, ಗೋದಾರ ಶಕ್ತ ಪುಡಿ ನೀಡಬೇಕು. ಹಸುಗಳಿಗೆ ಕೆಚ್ಚಲು ಬಾವು, ಕಾಲು ಬಾಯಿ ಜ್ವರ ಬರದಂತೆ ಎಚ್ಚರ ವಹಿಸಬೇಕು. ಅಗತ್ಯ ಬಿದ್ದಾಗ ಸಾಫ್‍ಕಿಟ್ ಬಳಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನೀಲಟೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಹೊಂದಿದ ಎನ್.ರಾಮರೆಡ್ಡಿ, ಎನ್.ಸಿ.ಶ್ರೀನಿವಾಸರೆಡ್ಡಿ ಅವರನ್ನು ಸನ್ಮಾನಿಸಿ, ಗೌರವ ಧನದ ಚೆಕ್ ನೀಡಿ ಬೀಳ್ಕೊಡಲಾಯಿತು. ಬೇರೆ ಬೇರೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರೂ.6.40 ಲಕ್ಷ ಆರ್ಥಿಕ ನೆರವು ನೀಡಲಾಯಿತು.
ಉಪ ಕಚೇರಿ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಎನ್.ಶಂಕರ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ, ಕೆ.ಪಿ.ಶ್ವೇತ, ಎಂ.ನಾರಾಯಣಸ್ವಾಮಿ, ಎಂ.ಆರ್.ಆಂಜಪ್ಪ ಇದ್ದರು.