

ಕೋಲಾರ:- `ಚಿನ್ನದ ನಾಡು ಕೋಲಾರದ ಜನತೆಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿಯವರ ಭಾಷಣದಲ್ಲಿ ಮುಳಬಾಗಿಲು ದೋಸೆಯ ಸ್ವಾದದ ಬಗ್ಗೆಯೂ ಪ್ರಸ್ತಾಪಿಸಿ ಗಮನ ಸೆಳೆದಿದ್ದು, ಮೋದಿ ಮೋದಿ ಜೈಕಾರ ಇಡೀ ಕಾರ್ಯಕ್ರಮದಲ್ಲಿ ಮುಗಿಲು ಮುಟ್ಟಿತು.
ಭಾನುವಾರ ತಾಲ್ಲೂಕಿನ ಕೆಂದಟ್ಟಿ ಸಮೀಪ ನಡೆದ ಬಿಜೆಪಿಯ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಚೆನ್ನೈ-ಬೆಂಗಳೂರು ಎಕ್ಸ್‍ಪ್ರೆಸ್ ಹೈವೆ ಕಾಮಗಾರಿಯ ಪ್ರಗತಿಯ ಕುರಿತು ಮಾತನಾಡುವಾಗ ಮುಳಬಾಗಿಲು ದೋಸೆಯ ಸ್ವಾದ ಇಂದು ಉತ್ತಮ ಸಂಪರ್ಕ ವ್ಯವಸ್ಥೆಯಿಂದ ದೂರದೂರಕ್ಕೆ ತಲುಪುವಂತಾಗಿದೆ ಎಂದರು.
ಡಬಲ್ ಇಂಜಿನ್ ಸರಕಾರ ಆಧುನಿಕ ಸಂಪರ್ಕಕ್ಕೆ ಕೆಲಸಮಾಡುತ್ತಿರುವಂತೆ ಹೊಸ ಕ್ಷೇತ್ರಗಳಲ್ಲಿಯೂ ಏಕ್ಸ್‍ಪ್ರೆಸ್ ವೇ ವೇಗವಾಗಿ ನಿರ್ಮಾಣ ವಾಗುತ್ತಿದೆ. ಇದರಿಂದ ರೈತರು ಉದ್ಯಮಿಗಳಿಗೆ ಅನುಕೂಲವಾಗುತ್ತದೆ, ಬಹು ರಾಷ್ಟ್ರೀಯ ಕಂಪನಿಗಳು ಕೋಲಾರದಲ್ಲಿ ಕೈಗಾರಿಕೆ ಅರಂಭಿಸಿವೆ, ಉತ್ತಮ ಸಂಪರ್ಕದಿಂದ ಅಭಿವೃದ್ಧಿ ಎಷ್ಟು ವೇಗವಾಗಿ ಸಾಧ್ಯ ಎಂದರೆ ಮುಳಬಾಗಿಲು ದೋಸೆಯ ಸ್ವಾದವು ದೂರ ದೂರಕ್ಕೆ ತಲುಪುವಂತಾಗಿದೆ ಎಂದರು.
ಬುದ್ದನ ಪ್ರತಿಮೆ ನೀಡಿ ಸನ್ಮಾನ
ಕೋಲಾರಕ್ಕೆ ಬಂದ ಪ್ರಧಾನಿಗಳನ್ನು ಹೆಲಿಪ್ಯಾಡ್‍ನಲ್ಲಿ ನಿಂತಿದ್ದ ಮೂರು ಜಿಲ್ಲೆಗಳ ಬಿಜೆಪಿ ಪ್ರಮುಖರು ಕೈಮುಗಿದು ಪ್ರಧಾನಿಗೆ ಸ್ವಾಗತಕೋರಿದರು. ನಂತರ ಕಪ್ಪು ಕಾರನ್ನೇರಿ ವೇದಿಕೆ ಸಭಾಂಗಣಕ್ಕೆ ತೆರಳಿದರು.
ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಕೋಲಾರಮ್ಮ ದೇವಾಲಯ, ಅಂತರಗಂಗೆ,ಆವಣಿ, ಕ್ಲಾಕ್‍ಟವರ್ ಧ್ವಜಾರೋಹಣ ಮತ್ತಿತರ ಮಾಹಿತಿ ಒಳಗೊಂಡ ಮೂರುವರೆ ಅಡಿ ಬುದ್ದನ ಮೂರ್ತಿಯನ್ನು ನೀಡಿ ಸಂಸದ ಎಸ್.ಮುನಿಸ್ವಾಮಿ, ಸಚಿವರಾದ ಸುಧಾಕರ್,ಎಂಟಿಬಿ ನಾಗರಾಜ್, ವಿಧಾನಪರಿಷತ್ ಮುಖ್ಯಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಸನ್ಮಾನಿಸಿದರು.
ಬೆಳಿಗ್ಗೆ 11.30 ಸುಮಾರಿಗೆ ಕೆಂದಟ್ಟಿ ಬಳಿ ನಿರ್ಮಿಸಿರುವ ವಿಶೇಷ ಹೆಲಿಪ್ಯಾಡ್‍ಗಳಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಮೂಲಕ ಕೋಲಾರಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದಾನಂದಗೌಡ, ಸಂಸದ ಎಸ್.ಮುನಿಸ್ವಾಮಿ, ಡಾ.ವೈ.ಎ.ನಾರಾಯಣಸ್ವಾಮಿ ಮತ್ತಿತರರು ಸ್ವಾಗತ ಕೋರಿದರು.
ಕೋಲಾರ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವರ್ತೂರು ಪ್ರಕಾಶ್ ವಿಶೇಷವಾಗಿ ಕುರುಬರ ಸಂಪ್ರದಾಯಿಕ ಕಪ್ಪು ಕಂಬಳಿ ನೀಡಿ ಸ್ವಾಗತಿಸಿ ಹಸ್ತ ಲಾಘವ ಮಾಡಿದರು. ಬಿಳಿ ಬಣ್ಣದ ಕುರ್ತಾ, ಕಪ್ಪು ಬಿಳುಪು ಚೌಕಲಿ ಮೇಲಂಗಿ ಧರಿಸಿದ್ದ ಮೋದಿ ಎಲ್ಲರ ಗಮನ ಸೆಳೆದರು.
ಬಿಗಿ ಬಂದೋಬಸ್ತ್ತಪಾಸಣೆ-ಪ್ರವೇಶ

ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ13 ವಿಧಾನಸಭಾ ಕ್ಷೇತ್ರಗಳ ಪ್ರಚಾರಕ್ಕಾಗಿ ಕೆಂದಟ್ಟಿಯ 150 ಎಕರೆ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರ ಪ್ರವೇಶಕ್ಕಾಗಿ 12 ಗೇಟ್‍ಗಳನ್ನು ನಿರ್ಮಿಸಲಾಗಿತ್ತು.
ಪ್ರತಿ ಗೇಟ್‍ನಲ್ಲಿ ಭದ್ರತಾ ಸಿಬ್ಬಂದಿ ಸಾರ್ವಜನಿಕರನ್ನು ತಪಾಸಣೆಗೊಳಪಡಿಸಿ ಪ್ರವೇಶ ನೀಡಿದರು. ಕಪ್ಪು ಬಟ್ಟೆ ಧರಿಸಿ ಬಂದವರಿಗೆ ಪ್ರವೇಶ ನಿರಾಕರಿಸಲಾಗಿತ್ತು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ತಂಡ ಪ್ರಥಮ ಚಿಕಿತ್ಸೆ ನಡೆಸಲು ಸಜ್ಜಾಗಿದ್ದು, ಸುಡು ಬಿಸಿಲಿನ ತಾಪಕ್ಕೆ ಬಳಲಿದ ಹಲವಾರು ಮಂದಿಗೆ ಚಿಕಿತ್ಸೆ ನೀಡಿದರು.
ಜನ್ನಘಟ್ಟ ಕೃಷ್ಣಮೂರ್ತಿ ತಂಡದಿಂದ ಗೀತ ಗಾಯನ ಕಾರ್ಯಕ್ರಮನಡೆಯಿತು. ಪ್ರಧಾನಿ ವೇದಿಕೆ ಸಭಾಂಗಣ ಪ್ರವೇಶಿಸುತ್ತಿದ್ದಂತೆಯೇ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಘೋಷಣೆಗಳನ್ನು ಕೂಗಿ ಅವರನ್ನು ಸ್ವಾಗತಿಸುವಂತೆ ನೆರೆದಿದ್ದ ಜನರನ್ನು ಪ್ರೋತ್ಸಾಹಿಸಿದರು
