ಕೋಲಾರ : ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗುವ ವಿವಿಧ ಸಾಮಗ್ರಿಗಳ ದರಗಳನ್ನು ನಿಗಧಿಪಡಿಸಿ ಚುನಾವಣೆ ಆಯೋಗಕ್ಕೆ ಕಳುಹಿಸಲಾಗುತ್ತದೆ.
ನೀತಿ ಸಂಹಿತೆ ಜಾರಿಯಲ್ಲಿರುವಾಗ ಕೈಗೊಳ್ಳಲಾಗುವ ಪ್ರಚಾರದ ವೆಚ್ಚವನ್ನು ಈ ದರಗಳ ಆಧಾರದ ಮೇಲೆಯೇ ಲೆಕ್ಕಹಕಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಶಂಕರ ವಣಿಕ್ಯಾಳ್ ಅವರು ತಿಳಿಸಿದರು.
ಇಂದು ಲೋಕಸಭಾ ಚುನಾವಣೆ-2024ರ ಪ್ರಚಾರ ಸಾಮಗ್ರಿಗಳ ದರ ನಿಗಧಿ ಕುರಿತು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ವೇಳೆ ಕೆಲವು ಸಾಮಗ್ರಿಗಳ ಧರಗಳು ಅಥವಾ ವೆಚ್ಚವು ನಿಗಧಿತ ಧರಕ್ಕಿಂತ ಕಡಿಮೆ ಇದ್ದರೆ, ಸಂಬಂಧಿಸಿದವರು ನಿಯಮಾನುಸಾರ ಸಲ್ಲಿಸಲಾಗುವ ರಸೀದಿಯನ್ನು ಸಹ ಪರಿಗಣಿಸಲು ಅವಕಾಶವಿರುತ್ತದೆ ಎಂದು ಸ್ಪಷ್ಟಪಡಿಸಿದರು.
ನೀತಿ ಸಂಹಿತೆ ಜಾರಿಯಲ್ಲಿರುವ ವೇಳೆ ಪ್ರಚಾರಕ್ಕಾಗಿ ಬಳಸಬಹುದಾದ ಪ್ರತಿಯೊಂದು ಸಾಮಗ್ರಿಗಳನ್ನು ಪಟ್ಟಿಮಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಮಾರುಕಟ್ಟೆ ದರ ನಿಗಧಿಪಡಿಸಲಾಗಿರುತ್ತದೆ. ಪ್ರಚಾರ ಸಂದರ್ಭದಲ್ಲಿ ಇವುಗಳನ್ನು ಬಳಕೆ ಮಾಡಿದಾಗ ಮಾತ್ರ ಚುನಾವಣಾ ವೆಚ್ಚದಲ್ಲಿ ಸೇರ್ಪಡೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಚರ್ಚೆಯ ಬಳಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ದರಗಳು ಹಾಗೂ ಗುಣಮಟ್ಟ ಆಧರಿಸಿ ಕೆಲವು ಸಾಮಗ್ರಿಗಳ ದರಗಳನ್ನು ಕಡಿಮೆ ಮಾಡುವಂತೆ ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ಗಂಗಾಧರ್, ಜಿಲ್ಲಾ ಚುನಾವಣೆ ವೆಚ್ಚ ನೋಡಲ್ ಅಧಿಕಾರಿ ಮುರುಗೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಾಮಮೂರ್ತಿ, ಚುನಾವಣಾ ಶಾಖೆಯ ಶರಿನ್ ತಾಜ್, ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.