ಶ್ರೀನಿವಾಸಪುರ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಆಧಾರ ರಹಿತ ಆಪಾದನೆ ಮಾಡುತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಶೇಷಾಪುರ ಗೋಪಾಲ್ ಅವರನ್ನು ಆ ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕೆ.ಕೆ.ಮಂಜುನಾಥರೆಡ್ಡಿ ಆಗ್ರಹಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಿದ ಶೇಷಾಪುರ ಗೋಪಾಲ್ ಅವರಿಗೆ, ಕೆ.ಆರ್.ರಮೇಶ್ ಕುಮಾರ್ ಅಥವಾ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.
ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕೆ.ಆರ್.ರಮೇಶ್ ಕುಮಾರ್ ಬಿಜೆಪಿ ಬೆಂಬಲಿಸಿ, ಕೆ.ಎಚ್.ಮುನಿಯಪ್ಪ ಅವರ ಸೋಲಿಗೆ ಕಾರಣರಾಗಿದ್ದಾರೆ. ಆ ಕಾರಣಕ್ಕಾಗಿ ಅವರನ್ನು ಕಾಂಗ್ರೆಸ್ನಿAದ ಉಚ್ಚಾಟಿಸಬೇಕು ಎಂದು ಮಾಧ್ಯಮದ ಮೂಲಕ ಆಪಾದಿಸಲಾಗಿದೆ. ಆದರೆ ಅದಕ್ಕೆ ಯಾವುದೇ ಪುರಾವೆ ಇಲ್ಲ. ರಮೇಶ್ ಕುಮಾರ್ ಅಂಥ ಕೀಳು ರಾಜಕೀಯ ಮಾಡುವವರಲ್ಲ. ಶೇಷಾಪುರ ಗೋಪಾಲ್ ಜೆಡಿಎಸ್ ಅಭ್ಯರ್ಥಿ ಜತೆ ಚುನಾವಣಾ ಪ್ರಚಾರ ಮಾಡಿದ್ದಕ್ಕೆ ಆಧಾರವಿದೆ ಎಂದು ಹೇಳಿದರು.
ಮುಖಂಡ ದರ್ಶನ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಮತದಾರರ ತೀರ್ಪಿಗೆ ತಲೆ ಬಾಗಲೇಬೇಕು. ಯಾವುದೇ ಒಬ್ಬ ವ್ಯಕ್ತಿಯಿಂದ ಸೋಲಿಸಲು ಸಾಧ್ಯವಿಲ್ಲ. ರಮೇಶ್ ಕುಮಾರ್ ಅವರನ್ನು ನಾನೇ ಸೋಲಿಸಿದೆ ಎಂದು ಶೇಷಾಪುರ ಗೋಪಾಲ್ ಹೇಳಿಕೊಳ್ಳುತ್ತಿರುವುದು ಸರಿಯಲ್ಲ. ರಮೇಶ್ ಕುಮಾರ್ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ ಎಂದು ಹೇಳುವುದರಲ್ಲೂ ಅರ್ಥವಿಲ್ಲ. ರಮೇಶ್ ಕುಮಾರ್ ಅವರಂಥ ಬುದ್ಧಿವಂತ ಹಾಗೂ ಸಮಾಜ ಮುಖಿ ರಾಜಕಾರಣಿ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಕ್ಕೆ ಬೇಕಾಗಿದೆ. ಆ ನಿಟ್ಟಿನಲ್ಲಿ ಪಕ್ಷ ಅವರನ್ನು ವಿಧಾನ ಪರಿಷತ್ಗೆ ಕಳಿಸಿಕೊಡಲು ನಿರ್ಧರಿಸಿದೆ ಎಂದು ಹೇಳಿದರು.
ಶಾಸಕರಾದವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಬೇಕಾಗುತ್ತದೆ. ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಕೆ.ಆರ್.ರಮೇಶ್ ಕುಮಾರ್ ತಮ್ಮದೇ ಆದ ಯೋಜನೆ ರೂಪಿಸಿದ್ದರು. ಕೃಷಿ, ನೀರಾವರಿ, ಆರೋಗ್ಯ ಹಾಗೂ ಸಮುದಾಯ ಅಭಿವೃದ್ಧಿಗೆ ಬಗ್ಗೆ ತಮ್ಮದೇ ಆದ ಕನಸು ಕಟ್ಟಿಕೊಂಡಿದ್ದರು. ಈ ನಿಟ್ಟಿನಲ್ಲಿ ಹಾಲಿ ಶಾಸಕರು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಮುಖಂಡರಾದ ಸೀತಾರಾಮರೆಡ್ಡಿ, ಎನ್.ತಿಮ್ಮಯ್ಯ, ಗೋಪಾಲ್ ಮಾತನಾಡಿದರು.
ಮುಖಂಡರಾದ ಕಾಂಗ್ರೆಸ್ ಜಿಲ್ಲಾ ಸಮಾಜಿಕ ಜಾಲ ತಾಣ ಅಧ್ಯಕ್ಷ ಕೆ.ಎನ್ .ಶ್ರೀನಿವಾಸ್., ಕೃಷ್ಣರೆಡ್ಡಿ,ಮಂಜುನಾಥ್ ರೆಡ್ಡಿ, ಅಯ್ಯಪ್ಪ, ಸಿ.ಮುನಿವೆಂಕಟಪ್ಪ,ವಿ.ಮುನಿಯಪ್ಪ, ಉಮಾದೇವಿ, ಗೋಪಾಲ್ ,ಹರೀಶ್ ಯಾದವ್,ವೇಣು, ಇದ್ದರು.