ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಏ.16 : ಕೋಲಾರ ತಾಲ್ಲೂಕು, ವೇಮಗಲ್ ಹೋಬಳಿ, ಬೆಳಮಾರನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಜಮೀನುಗಳಿಗೆ ಹೋಗುವ ಕಾಲುದಾರಿಯನ್ನು ಸವರ್ಣೀಯರು ಒತ್ತುವರಿ ಮಾಡಿಕೊಂಡು ಮುಚ್ಚಿಹಾಕಿದ್ದು, ಇದನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ರಂಜಿತ್ ಬಿ.ಎಂ ಒತ್ತಾಯಿಸಿದ್ದಾರೆ.
ಪರಿಶಿಷ್ಟ ಜಾತಿಯ ಜಮೀನುಗಳಿಗೆ ಹೋಗುವ ರಸ್ತೆ ಹಾಗೂ ಈ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದು, ಈ ಮನೆಗಲ್ಲಿ ತುಂಬುಗರ್ಭಿಣಿಯರು ಹಾಗೂ ಹಿರಿಯ ನಾಗರೀಕರು ಇದ್ದು, ಇವರಿಗೆ ಏನಾದರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ದಾರಿಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈಗ ಸುಮಾರು 3 ಕಿ.ಮೀ. ತೋಪುಗಳಲ್ಲಿ ಸುತ್ತಾಡಿಕೊಂಡು ಮನೆಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ಕಾಲುದಾರಿ ಕೇವಲ ನಕ್ಷೆಯಲ್ಲಿದ್ದು, ಉಪಯೋಗಿಸಲು ಸಾಧ್ಯವಾಗುತ್ತಿಲ್ಲ.
ಜಮೀನುಗಳಲ್ಲಿ ಮನೆಕಟ್ಟಿಕೊಂಡು ವಾಸವಿರುವ ಸಂಪರ್ಕ ಕಾಲು ದಾರಿಯನ್ನು ಸವರ್ಣೀಯರು ಮುಚ್ಚಿ ಹಾಕಿರುವ ಕಾರಣ ಏನಾದರೂ ಸಾವು-ನೋವುಗಳು ಸಂಭವಿಸಿದರೆ ಇವರುಗಳ ಸಾವಿಗೆ ಕೋಲಾರ ತಹಶೀಲ್ದಾರ್ ನಾಗರಾಜ್ ಅವರೇ ನೇರ ಕಾರಣರಾಗುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಾಲಂ 103 ರಂತೆ ತಹಶೀಲ್ದಾರರಿಗೆ ಸರ್ಕಾರಿ ರಸ್ತೆ ಗೋಮಾಳ ಕೆರೆ. ಮುಂತಾದ ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸಲು ಹಾಗೂ ಒತ್ತುವರಿದಾರರಿಂದ ವಶಕ್ಕೆ ಪಡೆಯಲು ಸ್ವತಂತ್ರರಾಗಿರುತ್ತಾರೆ ಆದರೂ ಸಹ ಕೋಲಾರ ತಹಶೀಲ್ದಾರ್ ರವರು ಕೋಲಾರ ತಾಲೂಕು ಬೆಳಮಾರನಹಳ್ಳಿ ಗ್ರಾಮ ಪಂಚಾಯಿತಿಯಿಂದ ಪರಿಶಿಷ್ಟ ಜಾತಿಯ
ಕುಟುಂಬದವರು ವಾಸವಾಗಿರುವ ಹಾಗೂ ಜಮೀನುಗಳಿಗೆ ಹೋಗಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿಯಿಂದ ರಸ್ತೆಯ ನಿರ್ಮಿಸಿಕೊಡಲು ಕಾಲುದಾರಿಯನ್ನು ಅಳತೆ ಮಾಡಲು ಮನವಿ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ
ಹಾಗಾಗಿ ಜಿಲ್ಲಾಧಿಕಾರಿಗಳು ಕೋಲಾರ ತಹಶೀಲ್ದಾರ್ ಹಾಗೂ ಬೆಳಮಾರನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿ ಕೂಡಲೇ ಸರ್ಕಾರಿ ಕಾಲುದಾರಿಯನ್ನು ಅಳತೆ ಮಾಡಿ ಪರಿಶಿಷ್ಟ ಜಾತಿ ಕುಟುಂಬಗಳು ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.

