ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ ಆಗಸ್ಟ್ 2: ಕೆಜಿಎಫ್ ನಗರದ ಬಸ್ ನಿಲ್ದಾಣದ ಸ್ವಾಗತ ಕಮಾನಿನ ಮೇಲೆ ತಮಿಳು ಭಾಷೆಯಲ್ಲಿ ಬರೆದಿದ್ದ ಕುವೆಂಪು ನಾಮಪಲಕಕ್ಕೆ ಮಸಿ ಬಳೆದು ಕನ್ನಡ ಮತ್ತು ತಮಿಳು ಭಾಷಿಕರ ನಡುವೆ ವಿಷ ಬೀಜ ಬಿತ್ತಲು ಯತ್ನಿಸಿ ಘನತೆ ಮತ್ತು ಗೌರವದಿಂದ ಬದುಕುತ್ತಿರುವ ಕೆಜಿಎಫ್ ಜನರ ಮೇಲೆ ಹೋರಾಟದ ಹೆಸರಿನಲ್ಲಿ ದೌರ್ಜನ್ಯ ನಡೆಸಿರುವ ಕನ್ನಡಮಿತ್ರ ವೆಂಕಟಪ್ಪ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಭಾರತೀಯ ದಲಿತ ಒಕ್ಕೂಟದ ರಾಜ್ಯಾಧ್ಯಕ್ಷ ಅನಂತಕೀರ್ತಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅನಂತಕೀರ್ತಿ ಕೆಜಿಎಫ್ ನಗರದಲ್ಲಿ ಶೇ.90ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರು ನೆಲಸಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ತಮಿಳುನಾಡಿನಿಂದ ವಲಸೆ ಬಂದ ಅವರೆಲ್ಲಾ ಕೆಜಿಎಫ್‍ನಲ್ಲಿ ನೆಲಸಿದ್ದು ಚಿನ್ನದ ಗಣಿಯಲ್ಲಿ ಕೆಲಸ ಮಾಡುವ ಮೂಲಕ ರಾಷ್ಟ್ರದ ಆರ್ಥಿಕ ಮೂಲಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಗಣಿಗಳಲ್ಲಿ ಕೆಲಸ ಮಾಡಲು ಕರ್ನಾಟಕದವರು ನಿರಾಕರಣೆ ಮಾಡಿದಾಗ ಅತ್ಯಂತ ಅಪಾಯಕಾರಿ ಗಣಿಗಾರಿಕೆಯಲ್ಲಿ ಅವರೆಲ್ಲಾ ಕೆಲಸ ಮಾಡಿದ್ದಾರೆ. ಗಣಿಗಳ ಆಳದಲ್ಲಿ ಕೆಲಸ ಮಾಡುವಾಗ ಸಂಬಂವಿಸಿಧ ಅಪಘಾತಗಳಲ್ಲಿ ಸಾವಿರಾರೂ ಮಂದಿ ಮೃತಪಟ್ಟಿದ್ದು ಚಿನ್ನ ಗಣಿಗಳನ್ನು ನಡೆಸುವಲ್ಲಿ ಆರೇಳು ತಲೆ ಮಾರುಗಳಿಂದ ಕೆಲಸ ಮಾಡಿದ್ದಾರೆ.
ಅವರೆಲ್ಲಾ ಶ್ರಮ ಜೀವಿಗಳಾಗಿದ್ದಾರೆ. ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಘನತೆ ಮತ್ತು ಗೌರವದಿಂದ ಬದುಕುತ್ತಿದ್ದಾರೆ. ಗೋಕಾಕ್ ಚಳುವಳಿ ನಂತರ ಕನ್ನಡ ಭಾಷೆಯನ್ನು ಪ್ರೀತಿಸುತ್ತಿದ್ದಾರೆ. ಕೆಜಿಎಫ್‍ನಲ್ಲಿ ಇದ್ದ ಸುಮಾರು ನೂರಕ್ಕೂ ಹೆಚ್ಚು ತಮಿಳು ಶಾಲೆಗಳನ್ನು ಮುಚ್ಚಲಾಗಿದೆ. ತಮಿಳು ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಕನ್ನಡ ಶಾಲೆಗಳತ್ತ ಮುಖಮಾಡಿದ್ದಾರೆ. ಕೆಜಿಎಫ್‍ನಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಿದ್ದು, ಕನ್ನಡ ಮತ್ತು ತಮಿಳು ಭಾಷಿಕರು ಪರಸ್ಪರ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ಅಲ್ಲಿನ ಪರಿಸ್ಥಿತಿ ಬಗ್ಗೆ ಅನಂತಕೀರ್ತಿ ವಿವರಿಸಿದ್ದಾರೆ.
ಕನ್ನಡ ಸಂಘಟನೆಯ ಹೆಸರನಲ್ಲಿ ಸ್ವಯಂ ಘೋಷಿತ ನಾಯಕರಾದ ಕನ್ನಡ ವೆಂಕಟಪ್ಪ ಕಳೆದ ತಿಂಗಳು ಕೆಲವರನ್ನು ಕರೆತಂದು ಕೆಜಿಎಫ್ ಬಸ್ ನಿಲ್ದಾಣದ ಸ್ವಾಗತ ಕಮಾನಿನಲ್ಲಿ ಬರೆಯಲಾಗಿದ್ದ ಕುವೆಂಪು ನಾಮಫಲಕಕ್ಕೆ ಮಸಿ ಬಳೆಸಿದ್ದಾರೆ. ಅವರು ಮಸಿ ಬಳೆದಿದ್ದು ತಮಿಳು ನಾಮಫಲಕವನ್ನ ಬದಲಾಗಿ ಕುವೆಂಪು ಮುಖಕ್ಕೆ ಮಸಿ ಬಳೆದಿದ್ದಾರೆ. ಕನ್ನಡ ಮತ್ತು ತಮಿಳು ಭಾಷಿಕರ ನಡುವೆ ಯಾವುದೇ ಸಮಸ್ಯೆ ಇಲ್ಲದಿದ್ದರು ಕೆಜಿಎಫ್‍ನಲ್ಲಿ ತಮಿಳು ಭಾಷೆಯಲ್ಲಿ ನಾಮಫಲಕ ಹಾಕಿದ್ದಾರೆ ಅದನ್ನ ತೆರೆಯಬೇಕೆಂದು ಕನ್ನಡಮಿತ್ರ ವೆಂಕಟಪ್ಪ ಪ್ರಚೋದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕನ್ನಡ ಪ್ರಾಧಿಕಾರ ಮತ್ತು ಕರ್ನಾಟಕ ಸರ್ಕಾರದ ಸುತ್ತೋಲೆಯಂತೆ ಕರ್ನಾಟಕದ ಯಾವುದೇ ಭಾಗದಲ್ಲಿ ನಾಮಫಲಕಗಳನ್ನು ಹಾಕುವಾಗ ಕನ್ನಡಕ್ಕೆ ಆಧ್ಯತೆ ನೀಡಬೇಕು. ಅದರಂತೆ ಕೆಜಿಎಫ್ ನಗರದ ಬಸ್ ನಿಲ್ದಾಣದಲ್ಲಿ ಕನ್ನಡಕ್ಕೆ ಆಧ್ಯತೆ ನೀಡಿ ಕುವೆಂಪು ಬಸ್ ನಿಲ್ದಾಣ ಎಂದು ನಾಮಫಲಕ ಹಾಕಲಾಗಿದ್ದು ಅನಂತರ ಚಿಕ್ಕದಾಗಿ ತಮಿಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಾಮಫಲಕ ಹಾಕಲಾಗಿದೆ. ನೆರೆಯ ತಮಿಳುನಾಡಿನಲ್ಲಿ ಕನ್ನಡ ಭಾಷೆಗೂ ಸಮಾನವಾದ ಅವಕಾಶ ಕಲ್ಪಿಸಲಾಗಿದೆ. ತಮಿಳುನಾಡು ಮತ್ತು ಕರ್ನಾಟಕದ ನಡುವೆ ವ್ಯಾಪಾರ ಸೇರಿದಂತೆ ಸಾಂಸ್ಕøತಿಕ ಸಂಬಂಧಗಳು ಇವೆ.
ಇತಿಹಾಸವನ್ನು ಅರಿಯಲಾರದ ವ್ಯಕ್ತಿ ಇತಿಹಾಸ ಬರೆಯಲಾರ ಎಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಅದೇ ಪ್ರಕಾರ ಕೆಜಿಎಫ್ ಮತ್ತು ತಮಿಳುನಾಡಿನ ಭಾಷಾ ಸೌರ್ಹಾದತೆ ಮತ್ತು ಸಾಂಸ್ಕøತಿ ಸಂಬಂಧಗಳ ಇತಿಹಾಸ ಅರಿಯದೆ ವೆಂಕಟಪ್ಪ ಹೋರಾಟ ಹೆಸರಿನಲ್ಲಿ ಪುಂಡಾಟಿಕೆ ನಡೆಸಿದ್ದಾರೆ. ಮಸಿ ಬಳಿಸುವ ಮೂಲಕ ಕೆಜಿಎಫ್ ನಿವಾಸಿಗಳಾದ ದಲಿತ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಸಂವಿಧಾನದಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಹಲವಾರು ಹಕ್ಕುಗಳನ್ನು ನೀಡಲಾಗಿದೆ. ಆದರೆ ಭಾಷಾ ಅಲ್ಪಸಂಖ್ಯಾತ ಹಕ್ಕುಗಳಿಗೆ ಚ್ಯುತಿ ಬರುವಂತೆ ಕನ್ನಡ ಮತ್ತು ತಮಿಳು ಭಾಷೆಗಳ ನಡುವೆ ಧ್ವೇಷ ಹುಟ್ಟಿಸುವ ಯತ್ನವನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಕೆಜಿಎಫ್ ನಗರದ ಜನರು ಅತ್ಯಂತ ಸಂಯಮದಿಂದ ವರ್ತಿಸಿದ ಕಾರಣ ಯಾವುದೇ ಗೊಂದಲಗಳು ಆಗಲಿಲ್ಲ. ಆದರೂ ವೆಂಕಟಪ್ಪ ಈಗಲೂ ಕೆಜಿಎಫ್ ತಮಿಳು ಭಾಷಿಕರ ವಿರುದ್ಧ ಪ್ರಚೋದನೆ ಮಾಡುವಂತಹ ಹೋರಾಟವನ್ನು ನಡೆಸಿದ್ದಾರೆ. ಸದಾ ಕನ್ನಡಪರ ಹೋರಾಟ ಮಾಡುತ್ತಿರುವ ಈ ನಾಡಿನ ಹಿರಿಯ ಚೇತನ ವಾಟಾಳ್ ನಾಗರಾಜ್‍ರವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಮತ್ತೇ ಕೆಜಿಎಫ್ ನಗರದಲ್ಲಿ ಆಗಸ್ಟ್ 8ರಂದು ತಮಿಳು ನಾಮಫಲಕಗಳಿಗೆ ಮಸಿ ಬಳೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯತ್ನ ನಡೆಸಿದ್ದಾರೆ. ಈ ಬಗ್ಗೆ ಸ್ವತಃ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.
ಕೆಜಿಎಫ್ ಕ್ಷೇತ್ರವನ್ನು ದಲಿತ ಶಾಸಕಿಯಾದ ರೂಪಕಲಾ ಶಶಿಧರ್ ಕಾಂಗ್ರೆಸ್ ಪಕ್ಷದಿಂದ ಪ್ರತಿನಿಧಿಸುತ್ತಿದ್ದಾರೆ. ಅವರು ಶಾಸಕಿಯಾಗಿ ಆಯ್ಕೆ ಆದ ಮೇಲೆ ಅವರು ಕೆಜಿಎಫ್ ಅಭಿವೃದ್ಧಿ ಆಗುತ್ತಿದ್ದು, ಜನಾನುರಾಗಿ ಶಾಸಕಿ ಆಗಿದ್ದಾರೆ. ಅವರ ಅಭಿವೃದ್ಧಿಯನ್ನು ಸಹಿಸದ ಬಿಜೆಪಿಯವರು ಸಂಚು ನಡೆಸಿದ್ದಾರೆ. ಕನ್ನಡಮಿತ್ರ ವೆಂಕಟಪ್ಪ ಬಿಜೆಪಿಯವರೊಂದಿಗೆ ಶಾಮೀಲಾಗಿ ಕೆಜಿಎಫ್‍ನಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಮಾಡಲು ಹೋರಾಟ ಹೆಸರಿನಲ್ಲಿ ಪುಂಡಾಟಿಕೆ ನಡೆಸುತ್ತಿದ್ದಾರೆ ಎಂದು ಅನಂತಕೀರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾಷೆ ಮತ್ತು ಹೋರಾಟ ಹೆಸರಿನಲ್ಲಿ ಪುಂಡಾಟಿಕೆ ನಡೆಸಿ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಠಿ ಮಾಡಲು ಯತ್ನಿಸುತ್ತಿರುವ ವೆಂಕಟಪ್ಪ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಾಯ್ದೆ ಮೇರೆಗೆ ಪ್ರಕರಣ ದಾಖಲಿಸಬೇಕು. ಮತ್ತು ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಅನಂತಕೀರ್ತಿ ಒತ್ತಾಯಿಸಿದ್ದಾರೆ.
ಒಂದು ವೇಳೆ ಜಿಲ್ಲಾಡಳಿತ ಮತ್ತು ಪೊಲೀಸರು ಕ್ರಮಕೈಗೊಳ್ಳದಿದ್ದಲ್ಲಿ ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.