

ಕೋಲಾರ:- ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಗುರಿ ಸಾಧನೆಗೆ ಕಲಿಕೆಯ ಹಸಿವು, ಛಲ, ಸತತ ಪರಿಶ್ರಮ, ಶ್ರದ್ಧೆ ಅಗತ್ಯವಾಗಿದ್ದು, ಸಂಕಲ್ಪದೊಂದಿಗೆ ಅಭ್ಯಾಸ ಮುಂದುವರೆಸಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಕೆ.ಶ್ರೀನಿವಾಸ್ ಕಿವಿಮಾತು ಹೇಳಿದರು.
ಬುಧವಾರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಸ್ಟಡೀ ಸರ್ಕಲ್ ಯೋಜನೆಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿತವಾಗಿರುವ ಹಲವು ಹುದ್ದೆಗಳ ಆಯ್ಕೆಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ತಯಾರಿಗಾಗಿ ನಡೆಸಲಾದ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧನೆಗೆ ದೈನಂದಿನ ವೃತ್ತಪತ್ರಿಕೆಗಳಲ್ಲಿ ಸಿಗುವ ಸಾಮಾನ್ಯ ಜ್ಞಾನ ನಿಮ್ಮದಾಗಿಸಿಕೊಳ್ಳಿ, ನಿಗಧಿತ ಪಠ್ಯವಸ್ತುವಿನ ಅಧ್ಯಯನ ಮಾಡಿ, ನಿರಂತರ ಓದು ಇಂತಹ ದೊಡ್ಡಮಟ್ಟದ ಸಾಧನೆಗೆ ಅಗತ್ಯವಿದ್ದು, ಅಂತಹವರು ಮಾತ್ರವೇ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದರು.
ಒಂದು ಕಾಲದಲ್ಲಿ ಕೋಲಾರ ಜಿಲ್ಲೆ ಎಂದರೆ ಕೆಎಎಸ್ ಅಧಿಕಾರಿಗಳ ತವರಾಗಿತ್ತು, ಇತ್ತೀಚಿನ ದಿನಗಳಲ್ಲಿ ಆ ಪ್ರಮಾಣ ಕಡಿಮೆಯಾಗುತ್ತಿದ್ದು, ಇಂದಿನ ವಿದ್ಯಾರ್ಥಿ ಸಮುದಾಯ ಮತ್ತೆ ಕೋಲಾರದ ಹಿರಿಮೆ ಎತ್ತಿಹಿಡಿಯಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ ಸಾಧಿಸಬೇಕು ಎಂದು ಕೋರಿದರು.
ಅಭ್ಯರ್ಥಿಗಳಿಗೆ ಪರೀಕ್ಷಾ ತಯಾರಿ ಕುರಿತು ಸಲಹೆ ಸೂಚನೆ ನೀಡಿದ ಅವರು,ನಿತ್ಯ ಅಧ್ಯಯನ, ಜ್ಞಾನಾರ್ಜನೆಗೆ ಅಗತ್ಯವಾದ ಪುಸ್ತಕ ಓದಿ ಇದರಿಂದ ನಿಮ್ಮ ಜ್ಞಾನದ ವೃದ್ದಿಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಶಕ್ತಿಯೂ ಬರುತ್ತದೆ ಎಂದರು.
ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ನೀಡಲಾಗುವ ಸೇವೆಗಳು ಸಹಾ ಬದಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ವೃತ್ತಿ ಉಪನ್ಯಾಸ, ಸಮಾಲೋಚನೆ, ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ, ಭಾರತೀಯ ಸೇನೆಯಲ್ಲಿನ ಉದ್ಯೋಗವಕಾಶಗಳ ಬಗ್ಗೆ ಮಾರ್ಗದರ್ಶನ, ಉದ್ಯೋಗ ಮೇಳಗಳ ಆಯೋಜನೆ ಮುಂತಾದ ಚಟುವಟಿಕೆಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡುತ್ತಿದ್ದು, ಎಲ್ಲಾ ಪರೀಕ್ಷೆಗಳ ರೂಪುರೇಷೆಗಳು, ಪಠ್ಯಕ್ರಮ, ಪ್ರಶ್ನೆಪತ್ರಿಕೆಗಳ ಮಾದರಿ ಮುಂತಾದ ವಿಷಯಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಪರೀಕ್ಷಾ ಪೂರ್ವದಲ್ಲಿಯೇ ಪಡೆದುಕೊಳ್ಳಲು ಸೂಚಿಸಿದರು.
ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಸಾಮಾನ್ಯ ಜ್ಞಾನ, ಗಣಕ ವಿಜ್ಞಾನದ ಅರಿವು, ಸಂಖ್ಯಾತ್ಮಕ ಸಾಮಥ್ರ್ಯ ಹಾಗೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳ ಬಗೆ ಹೆಚ್ಚಿನ ತಿಳುವಳಿಕೆ ಅಗತ್ಯವೆಂದು ತಿಳಿಸಿದರು. ಯಾವುದಾದರು ಒಂದು ಕನ್ನಡ ಮತ್ತು ಆಂಗ್ಲ ದಿನ ಪತ್ರಿಕೆಯನ್ನು ಪ್ರತಿದಿನವು ಅಧ್ಯಯನ ಮಾಡುವುದು ಅಗತ್ಯವೆಂದು ತಿಳಿಸಿದರು.
ಸ್ಟಡೀ ಸರ್ಕಲ್ ಯೋಜನೆಯಡಿಯಲ್ಲಿ ನೀಡಲಾಗುವ ತರಬೇತಿ ಕಾರ್ಯಕ್ರಮದ ಸಂಪೂರ್ಣ ಉಪಯೋಗವನ್ನು ಉದ್ಯೋಗಕಾಂಕ್ಷಿ ಅಭ್ಯರ್ಥಿಗಳು ಪಡೆದುಕೊಳ್ಳಲು ಹಾಗೂ ಹೆಚ್ಚಿನ ಪರಿಶ್ರಮದೊಂದಿಗೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಹಾಯಕ ಉದ್ಯೋಗಾಧಿಕಾರಿ ಮುನಿಕೃಷ್ಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಅಧಿಸೂಚಿತವಾಗಿರುವ ವಿವಿಧ ಹುದ್ದೆಗಳ ಬಗ್ಗೆ ಹಾಗೂ ಪಠ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿ, ಒಟ್ಟು 10 ದಿನಗಳ ಕಾಲ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯಾವುದೇ ಆಭ್ಯರ್ಥಿಗಳು ಗೈರು ಹಾಜರಾಗದೆ ಇರಲು ಸೂಚಿಸಿದರು.
ಸದರಿ ಪರೀಕ್ಷಾ ತರಬೇತಿಗೆ ಅಧ್ಯಯನ ಮಾಡಬೇಕಾದ ಪುಸ್ತಕಗಳ ಬಗೆ ಮಾಹಿತಿ ಒದಗಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಮೊಹಮ್ಮದ್ ಇಲಿಯಾಸ್, ನಾಗೇಶ್ ಹಾಗೂ ವಿನೋದ್ ರವರು ಪರೀಕ್ಷಾ ಪೂರ್ವ ಕಾರ್ಯಕ್ರಮದ ಸಂಪೂರ್ಣ ರೂಪುರೇಷೆಗಳು, ಪಠ್ಯಕ್ರಮ ಪ್ರಶ್ನೆಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕೇಳಲಾಗುವ ಮಾಹಿತಿ ಹಾಗೂ ಪ್ರಚಲಿತ ವಿದ್ಯಮಾನಗಳ ಬಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮದಲ್ಲಿ ಕಛೇರಿಯ ಸಿಬ್ಬಂದಿ ವರ್ಗದವರಾದ ಮನೋಜ್, ತಿಮ್ಮರಾಜು, ಹೀನಾ, ಶ್ವೇತಾ ಹಾಗೂ ಈಶ್ವರ್ ಪಾಲ್ಗೊಂಡಿದ್ದರು.
