ಕೋಲಾರ: ಭಾರತ ಸೇವಾದಳವು ಶತಮಾನೋತ್ಸವ ಕಾರ್ಯಕ್ರಮವನ್ನು ಡಿ. 28 ರಂದು ಮಾಲೂರು ಪಟ್ಟಣದ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಆಚರಿಸಲಾಗುತ್ತಿದ್ದು, ಆನಂತರ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಆಚರಿಸಲು ಭಾರತ ಸೇವಾದಳ ಜಿಲ್ಲಾ ಸಮಿತಿ ತೀರ್ಮಾನಿಸಿತು.
ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಅಧ್ಯಕ್ಷತೆಯಲ್ಲಿ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಮಾಲೂರು ಕಾರ್ಯಕ್ರಮದ ನಂತರ ಕೋಲಾರ ಜಿಲ್ಲಾ ಕೇಂದ್ರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸುಮಾರು 2 ಸಾವಿರ ಮಕ್ಕಳ ಸಮ್ಮುಖದಲ್ಲಿ ಭಾರತ ಸೇವಾದಳ ಶತಮಾನೋತ್ಸವ ಕಾರ್ಯಕ್ರಮ ಆಚರಿಸಲು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕಾರ ಕೋರಲು ಸಭೆ ನಿರ್ಣಯಿಸಿತು.
ಪ್ರತಿ ತಾಲೂಕಿನಲ್ಲಿ ಮಕ್ಕಳ ನಾಯಕತ್ವ ಶಿಬಿರ, ಜನವರಿ 26 ರ ಪೂರ್ವಭಾವಿಯಾಗಿ ತಾಲೂಕು ಮಟ್ಟದಲ್ಲಿ ಮತ್ತು ಶಾಲಾ ಹಂತದಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಭಾರತ ಸೇವಾದಳ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಫೆ.15 ರಿಂದ ಪ್ರತಿ ತಾಲೂಕಿನಲ್ಲಿ ಸೇವಾದಳ ಪರೀಕ್ಷೆಗಳನ್ನು ನಡೆಸಲು ಸೂಚಿಸಿ, ಅಧ್ಯಕ್ಷರ ಅಪ್ಪಣೆ ಮೇರೆಗೆ ಸೇವಾದಳ ಕೇಂದ್ರ ಕಚೇರಿ ಇರುವ ಘಟಪ್ರಭಾಗೆ ಅಧ್ಯಯನ ಪ್ರವಾಸ ತೆರಳಲು ತೀರ್ಮಾನಿಸಲಾಯಿತು.
ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್ ಶ್ರೀನಾಥ್ ಮಾತನಾಡಿ, ಭಾರತ ಸೇವಾದಳ ಶತಮಾನೋತ್ಸವ ಕಾರ್ಯಕ್ರಮಗಳನ್ನು ಇಡೀ ವರ್ಷ ಜಿಲ್ಲೆಯಾದ್ಯಂತ ವಿವಿಧೆಡೆ ವೈವಿಧ್ಯಮಯ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಆಚರಿಸಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಭಾರತ ಸೇವಾದಳ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು 100 ವರ್ಷಗಳ ಹಿಂದೆ ಹುಟ್ಟಿದಾಗ ನಾವ್ಯಾರು ಹುಟ್ಟಿರಲಿಲ್ಲ, ಈಗ ಅದೇ ಸಂಸ್ಥೆ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಂಸ್ಥೆಯ ಪದಾಕಾರಿಗಳಾಗಿ ಜವಾಬ್ದಾರಿ ಹೊತ್ತುಕೊಂಡಿರುವುದು ಸೌಭಾಗ್ಯದ ಹಿರಿಮೆಯ ವಿಷಯವಾಗಿದೆ, ಶತಮಾನೋತ್ಸವ ಕಾರ್ಯಕ್ರಮಗಳನ್ನು ಆಚರಿಸಲು ಎಲ್ಲಾ ಸದಸ್ಯರು ತಾಲೂಕು ಸಮಿತಿಗಳ ಸಹಕಾರ ಅಗತ್ಯ ಎಂದರು.
ಸಭೆಯಲ್ಲಿ ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ಕೋಶಾಧ್ಯಕ್ಷ ಕೆ.ಎಂ.ನಾಗರಾಜ್, ಮಾಲೂರು ಜಿಲ್ಲಾ ಸಮಿತಿ ಸದಸ್ಯ ಬಹಾದ್ದೂರ್ ಸಾಬ್, ತಾಲೂಕು ಅಧ್ಯಕ್ಷ ಶ್ರೀರಾಮ್, ಸದಸ್ಯರಾದ ಮುನಿವೆಂಕಟಯಾದವ್, ಗೋಕುಲ ಚಲಪತಿ, ಚಾಂದ್ ಪಾಷಾ, ಕೆಜಿಎಫ್ ತಾಲೂಕು ಅಧ್ಯಕ್ಷೆ ಪ್ರಭಾದೇವಿ, ಬಂಗಾರಪೇಟೆ ಶಾಖಾ ನಾಯಕ ಯಲ್ಲಪ್ಪ, ಅಜೀವ ಸದಸ್ಯ ವಿಶ್ವ ಮತ್ತಿತರರು ಹಾಜರಿದ್ದರು .