ಕೋಲಾರ : ಸಾರ್ವಜನಿಕರ ಅಹವಾಲುಗಳನ್ನು ಮುಖ್ಯಮಂತ್ರಿಗಳಿಗೆ ನೇರವಾಗಿ ನೀಡುವ ಜನತಾ ದರ್ಶನದ ಮುಂದುವರೆದ ಭಾಗವಾಗಿ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಿದೆ .
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು , ಕಾರ್ಯದರ್ಶಿಗಳು , ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ. ಅಂತೆಯೇ ತಾಲ್ಲೂಕು ಮಟ್ಟದಲ್ಲಿ ಶಾಸಕರು , ತಹಶೀಲ್ದಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ.
ಜಿಲ್ಲಾ ಮಟ್ಟದಲ್ಲಿ ಪ್ರತಿ ಮಾಹೆ ಒಂದರಂತೆ ಹಾಗೂ ಪ್ರತಿ 15 ದಿನಗಳಿಗೊಮ್ಮೆ ಆಯ್ದ ಒಂದು ತಾಲ್ಲೂಕಾ ಕೇಂದ್ರದಲ್ಲಿ ಜನತಾ ದರ್ಶನ ಏರ್ಪಡಿಸಲು ಸಿದ್ಧತೆ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ , ಜನತಾ ದರ್ಶನ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು , ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಈ ಹಿಂದೆ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದ್ದು , ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕುಂದು ಕೊರತೆಗಳು ಹಾಗೂ ಅಹವಾಲುಗಳನ್ನು ಪತ್ರಮುಖೇನ ಮುಖ್ಯಮಂತ್ರಿಗಳಿಗೆ ನೀಡುತ್ತಿದ್ದರು.
ಪ್ರಸ್ತುತ ಈ ವಿನೂತನ ಕಾರ್ಯಕ್ರಮದಿಂದ ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಕೊಡ ಬೇಕಾಗಿರುವ ಅಹವಾಲುಗಳನ್ನು ಸ್ಥಳೀಯವಾಗಿಯೇ ಸಂಬಂಧಿತ ಶಾಸಕರು ಅಥವಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಬಹುದಾಗಿದೆ.
ಇದರಿಂದ ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಅಹವಾಲುಗಳನ್ನು ನೀಡಲು ಭೇಟಿ ಮಾಡುವುದನ್ನು ತಪ್ಪಿಸಬಹುದಾಗಿದೆ ಹಾಗೂ ತಮ್ಮ ಸಮಸ್ಯೆಗಳನ್ನು ಹಾಗೂ ಕುಂದು ಕೊರತೆಗಳನ್ನು ಸ್ಥಳೀಯವಾಗಿ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಉದ್ದೇಶದಿಂದ ಕೋಲಾರ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಸೆ .25 ರಂದು ನಗರದ ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ . ಈ ಕಾರ್ಯಕ್ರಮದ ನಂತರ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲೆಯ ಯಾವುದಾದರೊಂದು ತಾಲ್ಲೂಕು ಕೇಂದ್ರದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು .
ಜನತಾ ದರ್ಶನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಇ – ಆಫೀಸ್ ತಂತ್ರಾಂಶವನ್ನು ಅನುಷ್ಠಾನ ಮಾಡಬೇಕಾಗಿರುತ್ತದೆ. ಇದರಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಇರುತ್ತದೆ.
ಇ – ಆಫೀಸ್ ಅನುಷ್ಠಾನ ಮಾಡಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಇಲಾಖೆಗಳು ಸಿದ್ಧಪಡಿಸಿಕೊಳ್ಳಬೇಕು ಜಿಲ್ಲಾಡಳಿತದ ವತಿಯಿಂದ ಇ – ಆಫೀಸ್ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗುವುದು. ತರಬೇತಿ ಅಗತ್ಯವಿರುವ ಸಿಬ್ಬಂದಿಯವರು ಕಾರ್ಯಗಾರದ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜನತಾ ದರ್ಶನ ಕಾರ್ಯಕ್ರಮದಂದು ಅಯಾ ಇಲಾಖೆಗಳು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅಹವಾಲುಗಳ ಸ್ವೀಕೃತಿ ಹಾಗೂ ವಿಲೇವಾರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಅಯಾ ಇಲಾಖೆಗಳ ಕೌಂಟರ್ ಗಳಲ್ಲಿ ಇಲಾಖೆಯ ವೆಬ್ ಸೈಟ್ , ಹೆಲ್ತ್ಲೈನ್ ಅಥವಾ ಕಂಟ್ರೋಲ್ ರೂಂಗಳ ಹಾಗೂ ಅಯಾ ಇಲಾಖೆಗಳ ಯೋಜನೆಗಳ ಬಗ್ಗೆ ವಿವರಗಳನ್ನು ಮುದ್ರಿಸಿ ಹಾಕಿರಬೇಕು. ಸಕಾಲ ತಂತ್ರಾಂಶವನ್ನು ಈ ಯೋಜನೆಗಾಗಿ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಅಥವಾ ಅಂತಹ ಯಾವುದೇ ಆನ್ ಲೈನ್ ಸೇವೆಗಳಿದ್ದಲ್ಲಿ , ಅವುಗಳನ್ನು ಈ ಯೋಜನೆಗೆ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಪದ್ಮ ಬಸವಂತಪ್ಪ ರವರು ಮಾತನಾಡಿ , ಜಿಲ್ಲೆಯಲ್ಲಿ ಪ್ರತಿ 2 ನೇ ಶನಿವಾರದಂದು ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಸಭೆಗಳನ್ನು ಏರ್ಪಡಿಸಲಾಗುತ್ತಿದ್ದು , ಈ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ತಿಳಿಸಿದರು.
ಇದರಿಂದ ಗ್ರಾಮಗಳ ಮಟ್ಟದಲ್ಲಿ ಕುಂದು ಕೊರತೆಗಳನ್ನು ಸ್ಥಳೀಯವಾಗಿ ಬಗೆಹರಿಸಲು ಮತ್ತು ಜನತಾ ದರ್ಶದಲ್ಲಿ ಅಹವಾಲುಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಅದೇ ರೀತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಕೆಡಿಪಿ ಸಭೆಗಳಿಗೂ ಸಹ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಾಗುವಂತೆ ಸೂಚಿಸಿದರು. ಸಾರ್ವಜನಿಕ ಕುಂದು ಕೊರತೆಗಳನ್ನು ಐ.ಪಿ.ಜಿ.ಆರ್.ಎಸ್ ಮೂಲಕ ನೋಂದಾಯಿಸಿ ಆನ್ ಲೈನ್ ಮೂಲಕ ಶೀಘ್ರವಾಗಿ ಪರಿಹರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಕೆ.ಜಿ.ಎಫ್ ವರಿಷ್ಠಾಧಿಕಾರಿಗಳಾದ ಶಾಂತರಾಜು , ಹೆಚ್ಚುವರಿ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಾದ ಬಾಸ್ಕರ್ , ಎಲ್ಲಾ ತಾಲ್ಲೂಕಿನ ತಹಶಿಲ್ದಾರರ ಗಳು , ಕೃಷಿ ಜಂಟಿ ನಿರ್ದೇಶಕರಾದ ರೂಪದೇವಿ , ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀನಿವಾಸ್.ಎಂ , ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ || ಜಗದೀಶ್ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು .