ತೊಗರಿ ಬೆಳೆಯಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಸಸ್ಯ ಸಂರಕ್ಷಣಾ ಕ್ರಮಗಳು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ತೊಗರಿಯು ರಾಜ್ಯದ ಪ್ರಮುಖವಾದ ದ್ವಿದಳ ಧಾನ್ಯವಾಗಿದ್ದು, 2018-19ರ ಪ್ರಕಾರ ಕೋಲಾರ ಜಿಲ್ಲೆಯಲ್ಲಿ ತೊಗರಿಯು 2053 ಹೇಕ್ಟೆರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು 876 ಟನ್ ಉತ್ಪಾದನೆಯಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ತೊಗರಿ ಬೆಳೆಯಲ್ಲಿ ಕೆಲವು ಭಾಗಗಳಲ್ಲಿ ಸೊರಗು ರೋಗವು ಕಾಣಿಸಿಕೊಳ್ಳುತ್ತಿದ್ದು ಅದು ಮಣ್ಣಿನಲ್ಲಿರುವ ಶೀಲಿಂದ್ರದಿಂದ ಬರುತ್ತದೆ. ಇದಕ್ಕೆ ಕಾರಣ ತುಂಬಾ ಮಳೆಯಾಗಿದ್ದು ತದನಂತರ ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗಿರುವುದರಿಂದ ಈ ರೋಗವು ಕಾಣಿಸುತ್ತಿದೆ. ರೋಗದ ಪ್ರಮುಖ ಲಕ್ಷಣಗಳು- ಗಿಡಗಳು ಬಾಡುವುದು, ಒಣಗುವುದು, ಸಸಿ ಹಂತದಲ್ಲಿ ಕಂಡುಬಂದರೂ ಹೂ ಬಿಡುವ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಗಿಡದ ಕೆಳಗಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ರೋಗಪೀಡಿತ ಕಾಂಡಗಳನ್ನು ಸೀಳಿ ನೋಡಿದಾಗ ಕಾಂಡದ ಬಣ್ಣವು ಕಂದು ಬಣ್ಣಕ್ಕೆ ತಿರುಗಿರುತ್ತದೆ. ಇದರ ಪರಿಹಾರ ಬಿತ್ತನೆಗೂ ಮುಂಚೆ ಶಿಲೀಂದ್ರನಾಶಕಗಳಿಂದ (ಕಾರ್ಬೆಡೈಂಜಿಮ್ 24 ಗ್ರಾಂ/ ಎಕರೆ ಬಿತ್ತನೆ ಬೀಜಕ್ಕೆ) ಅಥವಾ ಜೈವಿಕ ಪೀಡೆನಾಶಕದಿಂದ (200 ಗ್ರಾಂ ಟ್ರೈಕೋಡರ್ಮ/ ಎಕರೆ ಬಿತ್ತನೆ ಬೀಜಕ್ಕೆ) ಬೀಜೋಪಚಾರ ಮಾಡುವುದು. ಸಸಿ ಹಂತದಲ್ಲಿ ಕಂಡು ಬಂದಾಗ ಅಂತರವ್ಯಾಪಿ ಶೀಲೀಂದ್ರನಾಶಕದಿಂದ ಸಿಂಪರಣೆ ಮಾಡುವುದು. ಇದಕ್ಕೆ ಬರುವ ಮತ್ತೊಂದು ರೋಗ ಎಂದರೆ ಬಂಜೆ ರೋಗ.
ಬಂಜೆರೋಗ: ಈ ನಂಜುರೋಗವು ನುಸಿಯಿಂದ ಹರಡುತ್ತದೆ. ರೋಗ ಬಂದಂತಹ ಸಸ್ಯಗಳು ತಿಳಿಹಸಿರುವ ಬಣ್ಣ ಹೊಂದಿದ್ದು ಇಂತಹ ಗಿಡಗಳಿಂದ ಹೂ ಕಾಯಿಗಳು ಬರುವುದಿಲ್ಲ ಇದರ ನಿರ್ವಹಣೆಗೆ ಡೈಕೋಫಾಲ್ ನುಸಿನಾಶಕ 2.5 ಮಿ.ಲೀ, ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬಿತ್ತನೆ ಮಾಡಿದ 30-45 ದಿನಗಳಲ್ಲಿ ಸಿಂಪರಣೆ ಮಾಡುವುದು.
ಕಾಯಿ ಕೊರಕ: ಮೊಗ್ಗು ಮತ್ತು ಹೂ ಬಿಡುವ ಸಮಯದಿಂದಲೇ ಪ್ರಾರಂಭವಾಗುತ್ತದೆ. ಕಾಯಿಗಳ ಮೇಲೆ ರಂಧ್ರವನ್ನು ಕೊರೆದು ಒಳಗಿರುವ ಬೀಜಗಳನ್ನು ತಿಂದು ನಾಶ ಮಾಡುತ್ತವೆ. ಹತೋಟಿಗೆ ಸುಮಾರು ಶೇ. 50 ರ ಇಂಡಾಕ್ಸಾಕಾರ್ಬ್ 14.5 ಎಸ್.ಸಿ (0.5 ಮಿ.ಲೀ) ಅಥವಾ ಸ್ಪೈನೋಸಾಡ್ 45 ಎಸ್.ಸಿ (0.15 ಮಿ.ಲೀ) ಪ್ರತಿ ಲೀಟರ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.
ತೊಗರಿಯಲ್ಲಿ ಗೂಡು ಮಾರುಹುಳು: ಎಲೆ, ಮೊಗ್ಗ್ಗು, ಹೂ ಮತ್ತು ಎಳೆಯ ಕಾಯಿಗಳನ್ನು ಬಲೆಯಿಂದ ನೆಯ್ದು ಗೂಡು ಮಾಡಿಕೊಳ್ಳುತ್ತವೆ. ಕೀಟಬಾಧಿತ ಹೂಗಳು ನೆಲಕ್ಕೆ ಬೀಳುತ್ತವೆ ಮತ್ತು ಗಿಡಗಳಲ್ಲಿ ಕಾಯಿ ಕಚ್ಚುವುದಿಲ್ಲ. ಹತೋಟಿಗೆ ಶೇ. 10 ರಷ್ಟು ಹೂ ಬಂದ ಸಮಯದಲ್ಲಿ ಪ್ರೋಫೆನೊಫಾಸ್ 2 ಮಿ.ಲೀ/ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸುವುದು.
ಹೆಚ್ಚಿನ ಇಳುವರಿಗಾಗಿ ಹೂ ಬಿಡುವ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಶೇ.1 ರ ಸತುವಿನ ಸಲ್ಪೇಟನ್ನು 15 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು. ಪಲ್ಸ್ ಮ್ಯಾಜಿಕ್ 2 ಕೆ.ಜಿ/ ಎಕರೆಗೆ 200 ಲೀ. ನೀರಿನಲ್ಲಿ ಬೆರೆಸಿ 15 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಗಿಡವು 1-1.5 ಅಡಿ ಉದ್ದವಿರುವಾಗ ಅಥವಾ (ಬೆಳೆ ಕವಲೊಡೆಯುವ ಹಂತದಲ್ಲಿ) ಗಿಡದ ತುದಿಯ ಒಂದು ಇಂಚನ್ನು ಚಿವುಟವುದರಿಂದ ಗಿಡ ಎತ್ತರಕ್ಕೆ ಬೆಳೆಯುವ ಬದಲು ಹೆಚ್ಚು ಕವಲುಗಳನ್ನು ಬಿಡುತ್ತದೆ.