ಮಂಗಳೂರು: “ಕೇರಳದಲ್ಲಿ ಕಾಣಿಸಿರುವ ನಿಫಾ ವೈರಸ್ ಸೋಂಕು ರಾಜ್ಯಕ್ಕೆ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದಲ್ಲಿ ಯಾರಿಗೂ ಸೋಂಕು ತಟ್ಟಬಾರದು. ಆ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ” ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೇರಳದ ಗಡಿಗೆ ತಾಗಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಭೆಯನ್ನು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ನಿಫಾದ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ. ಕೇರಳಕ್ಕೆ ಸಮೀಪದಲ್ಲಿರುವ ನಾಲ್ಕು ಜಿಲ್ಲೆಗಳ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯ ನಡೆಯುತ್ತಿದೆ.
ದ.ಕ ಜಿಲ್ಲೆಯ 12 ಚೆಕ್‌ಪೋಸ್ಟ್‌ಗಳಲ್ಲಿ 2184, ಮೈಸೂರಿನ 4 ಚೆಕ್ ಪೋಸ್ಟ್‌ಗಳಲ್ಲಿ 6,500, ಕೊಡಗು 4 ಚೆಕ್‌ಪೋಸ್ಟ್ ಗಳಲ್ಲಿ 1,132 ಮತ್ತು ಚಾಮರಾಜನಗರದ 2 ಚೆಕ್‌ಪೋಸ್ಟ್‌ಗಳಲ್ಲ್ 1,600 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಆರೋಗ್ಯ ಇಲಾಖೆಯು ಅಗತ್ಯದ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಸೋಂಕು ಪತ್ತೆಯಾದರೆ ಕ್ವಾರಂಟೈನ್, ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್‌ಗಳು , ಮಾಸ್ಕ್ ಮತ್ತಿತರ ವ್ಯವಸ್ಥೆಗೆ ಅಗತ್ಯದ ತಯಾರಿ ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಆನಂದ್, ಆರೋಗ್ಯ, ಇಲಾಖೆಯ ಜಂಟಿ ನಿರ್ದೇಶಕಿ ಡಾ. ತ್ರಿವೇಣಿ, ವಿಭಾಗೀಯ ಸಹ ನಿರ್ದೇಶಕಿ ಡಾ. ರಾಜೇಶ್ವರಿ ದೇವಿ ಮೊದಲಾದವರು ಉಪಸ್ಥಿತರಿದ್ದರು.